ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ (ಐಪಿಎಲ್ 2024) 6ನೇ ಪಂದ್ಯದ ಮೂಲಕ ಸಿ.ಎಸ್.ಕೆ ಪರ ಕಣಕ್ಕಿಳಿದಿರುವ ಮಥೀಶ ಪತಿರಾಣ 4 ಓವರ್ಗಳಲ್ಲಿ 29 ರನ್ ನೀಡಿ 1 ವಿಕೆಟ್ ಕಬಳಿಸಿದ್ದಾರೆ. ಈ 29 ರನ್ಗಳಲ್ಲಿ ಅವರು 5 ವೈಡ್ಗಳನ್ನು ಎಸೆದಿದ್ದರು. ಇದಾಗ್ಯೂ 18ನೇ ಓವರ್ನಲ್ಲಿ ಮಾರಕ ಎಸೆತದ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಅತೀ ವೇಗದದಲ್ಲಿ ಚೆಂಡೆಸೆದ ಬೌಲರ್ ಎನಿಸಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ (IPL 2024) 6ನೇ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸುವ ಮೂಲಕ ಮಥೀಶ ಪತಿರಾಣ (Matheesha Pathirana) ದಾಖಲೆ ಬರೆದಿದ್ದಾರೆ. ಅದು ಕೂಡ ವೇಗದ ಯಾರ್ಕರ್ ಎಸೆತಗಳ ಮೂಲಕ ಎಂಬುದು ವಿಶೇಷ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಪತಿರಾಣ 145 ರ ಅಸುಪಾಸಿನಲ್ಲಿ ಚೆಂಡೆಸೆಯುವ ಮೂಲಕ ಗಮನ ಸೆಳೆದರು. ಅದರಲ್ಲೂ 18ನೇ ಓವರ್ನಲ್ಲಿ ಎಸೆದ ಎಸೆತವೊಂದು 150 ಕಿ.ಮೀ ವೇಗದಲ್ಲಿ ಸಾಗಿತ್ತು.
18ನೇ ಓವರ್ನ ಕೊನೆಯ ಎಸೆತದಲ್ಲಿ ಬ್ಯಾಟಿಂಗ್ಗೆ ನಿಂತಿದ್ದ ರಾಹುಲ್ ತೆವಾಟಿಯಾ ಕಣ್ಣು ಮಿಟುಕಿಸುವಷ್ಟರಲ್ಲಿ ಚೆಂಡು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಕೈ ಸೇರಿತ್ತು. ಅತ್ತ ಚೆಂಡಿನ ವೇಗವನ್ನು ಗಮನಿಸಿದಾಗ ಬರೋಬ್ಬರಿ 150.6 Kmph ಸ್ಪೀಡ್ನಲ್ಲಿ ಸಾಗಿರುವುದು ಕಂಡು ಬಂತು.
ಇದರೊಂದಿಗೆ ಐಪಿಎಲ್ 2024 ರಲ್ಲಿ 150 Kmph ಗಿಂತ ಹೆಚ್ಚಿನ ವೇಗದಲ್ಲಿ ಚೆಂಡೆಸೆದ ಮೊದಲ ಬೌಲರ್ ಎಂಬ ದಾಖಲೆ ಮಥೀಶ ಪತಿರಾಣ ಹೆಸರಿಗೆ ಸೇರ್ಪಡೆಯಾಯಿತು. ಅಲ್ಲದೆ ಇದು ಈ ಬಾರಿಯ ಐಪಿಎಲ್ನಲ್ಲಿ ಕಂಡು ಬಂದಿರುವ ಇದುವರೆಗಿನ ಅತೀ ವೇಗದ ಎಸೆತ ಎಂಬುದು ವಿಶೇಷ.
ಇನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಚೆಂಡೆಸೆದ ದಾಖಲೆ ಆಸ್ಟ್ರೇಲಿಯಾದ ಶಾನ್ ಟೈಟ್ ಹೆಸರಿನಲ್ಲಿದೆ. 2011 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಟೈಟ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 157.71 Kmph ವೇಗದಲ್ಲಿ ಚೆಂಡೆಸೆದು ದಾಖಲೆ ನಿರ್ಮಿಸಿದ್ದಾರೆ.
ಐಪಿಎಲ್ 2022 ರಲ್ಲಿ ಲಾಕಿ ಫರ್ಗುಸನ್ 157.3 kmph ವೇಗದಲ್ಲಿ ಚೆಂಡೆಸೆಯುವ ಮೂಲಕ ಈ ದಾಖಲೆ ಸಮೀಪಕ್ಕೆ ಬಂದಿದ್ದರು. ಹಾಗೆಯೇ ಸನ್ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಯುವ ವೇಗಿ ಉಮ್ರಾನ್ ಮಲಿಕ್ ಐಪಿಎಲ್ 2022 ರಲ್ಲಿ 157 kmph ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಹೀಗಾಗಿ ಈ ಇಬ್ಬರು ವೇಗಿಗಳು ಶಾನ್ ಟೈಟ್ ಹೆಸರಿನಲ್ಲಿರುವ ಈ ವಿಶೇಷ ದಾಖಲೆಯನ್ನು ಅಳಿಸಿ ಹಾಕುತ್ತಾರಾ ಕಾದು ನೋಡಬೇಕಿದೆ.