ಚಿತ್ರದುರ್ಗ, ಮಾರ್ಚ್. 27 : ಜಾಗತಿಕ ಮಟ್ಟದಲ್ಲಿ ಮಾನವ ನಿರ್ಮಿತ ಪರಿಕರಗಳು ಅಳತೆಗಳನ್ನು ಮೀರಿ ವಿದ್ಯಮಾನಗಳು ಬೆಳೆಯುತ್ತಿವೆ. ಭೂಮಿ ಮೇಲೆ ಮಾತ್ರವಲ್ಲದೆ ಚಂದ್ರಯಾನದಲ್ಲಿ ಭಾರತ ಸೇರಿ ಚೀನ, ರಷ್ಯಾ ಮತ್ತು ಅಮೇರಿಕದ ಅಂತರಿಕ್ಷ ನೌಕೆಗಳಿವೆ. ಚಂದ್ರ ಮತ್ತು ಭೂಮಿಯ ಮಧ್ಯದಲ್ಲಿ ನೆಲೆನಿಂತಿವೆ. ಹಾರಾಡುವ ನೌಕೆಗಳು ಭೂಮಿಯ ಸುತ್ತ ಇರುವ ಬೆಳವಣಿಗೆಗಳನ್ನು ಅಧ್ಯಯನ ಮಾಡುತ್ತಿವೆ.
ಒಂದು ದೇಶದ ವಿದ್ಯಮಾನ ಮತ್ತೊಂದು ದೇಶಕ್ಕೆ ಗೊತ್ತಾಗುತ್ತವೆ. ಆದರೆ ಸೋವಿಯತ್ ರಷ್ಯಾ ಮತ್ತು ಚೀನ ದೇಶದ ವಿಷಯಗಳು ಗೊತ್ತಾಗುವುದಿಲ್ಲ. ಸ್ವತಂತ್ರತೆಗೆ ಮುಕ್ತ ಅವಕಾಶಗಳು ಕಡಿಮೆಯಾಗಿವೆ. ಈ ಬಾರಿಯ ವಿಶ್ವ ರಂಗಭೂಮಿ ದಿನಾಚರಣೆಯ ವಿಶ್ವಸಂದೇಶವು ಶಾಂತಿ ಮತ್ತು ಯುದ್ಧವನ್ನು ಕುರಿತು ಸೂಕ್ಷ್ಮತೆಗಳನ್ನು ಬಿಚ್ಚಿಡುತ್ತಿದೆ. ಜಾಗತಿಕ ಸಂಬಂಧಗಳನ್ನು ಆರೋಗ್ಯ ಪೂರ್ಣವಾಗಿ ಪೂರೈಸುವ ಏಕೈಕ ಮಾಧ್ಯಮ ಎಂದರೆ ಅದು ರಂಗಭೂಮಿ ಮಾತ್ರ ಎಂದು ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಜಿ.ಎಸ್ ಉಜ್ಜಿನಪ್ಪ ಅಭಿಪ್ರಾಯಪಟ್ಟರು.
ನಗರದ ಕೆ.ಬಿ.ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ -2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯನಿಗೆ ಮಾತ್ರವಲ್ಲದೇ ಎಲ್ಲಾ ಪ್ರಾಣಿಗಳಿಗೂ ಸ್ವತಂತ್ರ ಬೇಕು. ಮಣಿಪುರ ಮತ್ತು ತ್ರಿಪುರ ರಾಜ್ಯಗಳನ್ನು ಚೀನ ನನಗೆ ಸೇರಿದ್ದೆಂದು ತಗಾದೆ ತೆಗೆದಿದೆ.
ಶತಶತಮಾನಗಳಿಂದ ಭಾರತ ದೇಶಕ್ಕೆ ಈ ರಾಜ್ಯಗಳು ಸೇರಿದ್ದರೂ ಅಲ್ಲಿಗೆ ಪ್ರವೇಶವನ್ನು ನಿರಾಕರಿಸುತ್ತಿವೆ. ಮಾರಣಾಂತಿಕ ಯುದ್ಧದ ಜಾಗತಿಕ ಚಿಂತನೆ ನಡೆಸುತ್ತಿರುವ ಮಧ್ಯದಲ್ಲಿ ನಾವಿದ್ದೇವೆ. ಮನುಷ್ಯನಲ್ಲಿ ಶಾಂತಿ ನೆಲೆಸಬೇಕಾದರೆ ಹಾಡು, ಕುಣಿತಗಳು ಬೇಕಾಗುತ್ತವೆ. ಅದೊಂದು ಸಂಕೀರ್ಣ ಕಲೆ. ಮಾನವೀಯ ಜೀವನ ಮೌಲ್ಯಗಳು, ನೃತ್ಯ, ಸಂಗೀತಗಳನ್ನು ನಾಟಕದ ಮೂಲಕ ಆಸ್ವಾದಿಸುತ್ತೇವೆ.
ಕಲ್ಕತ್ತಾದಲ್ಲಿ ಬ್ರಿಟೀಷ್ ಅಧಿಕಾರಿಯಾಗಿದ್ದ ವಿಲಿಯಮ್ ಜೋನ್ಸ್ ಮತ್ತಿತರ ಪಾಶ್ಚಾತ್ಯ ಅಧಿಕಾರಿಗಳು ನಮ್ಮ ಸಂಸ್ಕøತ ಸಾಹಿತ್ಯಗಳನ್ನು ಅನುವಾದಿಸಿದ್ದಾರೆ. ಅಭಿಜ್ಞಾನ ಶಾಕುಂತಲ ನಾಟಕವನ್ನು ಫ್ರೆಂಚ್ ಮತ್ತು ಇಂಗ್ಲೀಷ್‍ಗೆ ಅನುವಾದಿಸಿದ ಕೃತಿಯನ್ನು ಮೈಸೂರಿನ ಅರಮನೆಯಲ್ಲಿದ್ದ ಅಭಿನವ ಕಾಳಿದಾಸ ಬಸವಪ್ಪಶಾಸ್ತ್ರಿಗಳು ಕನ್ನಡಕ್ಕೆ ಅನುವಾದಿಸಿದರು.
ಅಲ್ಲಿಂದ ನಮ್ಮ ಭಾರತೀಯ ರಂಗಭೂಮಿಯಲ್ಲಿ ಸಂಸ್ಕøತ ಸಾಹಿತ್ಯದ ಶ್ರೀಮಂತಿಕೆಯನ್ನು ಕಾಣುತ್ತೇವೆ. ಕನ್ನಡ ಮತ್ತು ಸಂಸ್ಕøತ ಸಾಹಿತ್ಯದ ಅಗಾಧತೆಯನ್ನು ಪರಿಚಯಿಸಿದರು. 16ನೇ ಶತಮಾನದಲ್ಲಿದ್ದ ಷಡಾಕ್ಷದೇವ ಕವಿಯು ಶಿವನನ್ನು ಕುರಿತು ಬರೆದ ರಾಜಶೇಖರ ವಿಳಾಸ, ಶಬರಶಂಕರ ವಿಳಾಸ ಮತ್ತು ಭಕ್ತಿಭಂಢಾರಿ ಬಸವಣ್ಣನ ಕುರಿತ ಬಸವರಾಜ ವಿಜಯ ಕೃತಿಗಳು ಚಂಪೂಶೈಲಿಯಲ್ಲಿದ್ದು, ಉನ್ನತ ಅಭ್ಯಾಸದ ಪಠ್ಯಕ್ರಮಗಳಾಗಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಮರ ಕೃತಿಗಳಾಗಿವೆ. ಸಂಸ್ಕøತ ಸಾಹಿತ್ಯದಲ್ಲಿಯ ಕೃತಿಗಳು ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಮಹತ್ವದ ಕೊಡುಗೆ ನೀಡಿವೆ ಎಂದರು.
ನಿವೃತ್ತ ಮುಖ್ಯಶಿಕ್ಷಕ ಹಾಗೂ ಸಾಹಿತಿ ಹುರುಳಿ ಬಸವರಾಜ್ ಶಿಕ್ಷಣದಲ್ಲಿ ರಂಗಭೂಮಿಯ ಪ್ರಸ್ತುತತೆ ವಿಷಯವಾಗಿ ಉಪನ್ಯಾಸ ನೀಡುತ್ತಾ ಆಧುನಿಕತೆ ಮತ್ತು ವೈಜ್ಞಾನಿಕ ಯುಗದಲ್ಲಿ ಸರಿಯಾದ ಮಾರ್ಗದರ್ಶನ ಹಾಗೂ ಅಧಿಕಾರದ ಓಲೈಕೆಗಾಗಿ ವೃತ್ತಿಧರ್ಮವನ್ನು ಮರೆತು ಆಮಿಷಗಳಿಗೆ ಒಳಗಾಗುವ ಸಮಾಜಕ್ಕೆ ಅರ್ಥಪೂರ್ಣವಾಗಿ ಜಾಗೃತಿ ಮೂಡಿಸುವ ಮಾಧ್ಯಮವೆಂದರೆ ಅದು ರಂಗ ಮಾಧ್ಯಮ.
ಸಾಮಾಜಿಕ ಸಂಬಂಧಗಳ ಗಟ್ಟಿತನ, ವೈಚಾರಿಕ ಪ್ರಜ್ಞೆಯನ್ನು ರಂಗಕಲೆಯ ಮೂಲಕ ನೀಡುವ ಸಂದೇಶಗಳು ಉತ್ತಮ ಮಾರ್ಗದರ್ಶನಗಳಾಗಿವೆ. ರಂಗಭೂಮಿ ಕ್ಷೇತ್ರಕ್ಕೆ ಯಾವುದೇ ಭಾಷೆ, ಸಂಸ್ಕøತಿ, ಜಾತಿ, ಮತಪಂಥಗಳಿಲ್ಲ. ಇವನ್ನೂ ಮೀರಿ ಜಗತ್ತಿನಾದ್ಯಂತ ಸಾಮರಸ್ಯವನ್ನು ಸಾರುತ್ತಿದೆ. ಶಿಕ್ಷಕರಿಗೆ ರಂಗಭೂಮಿ ಶಿಕ್ಷಣ ವರದಾನವಾಗಬೇಕು ಎಂದರು.
ಪ್ರಾಚಾರ್ಯ ಡಾ.ಎ.ಜಿ.ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ರಂಗ ನಿರ್ದೇಶಕ ಕೆಪಿಎಂ.ಗಣೇಶಯ್ಯ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಾರ್ವೆ ದೇಶದ ವಿಶ್ವವಿಖ್ಯಾತ ನಾಟಕಕಾರ, ಹಿರಿಯ ಸಾಹಿತಿ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕøತ ಜಾನ್ ಪೋಸ್ಸೇ ವಿರಚಿತ ರಂಗಸಂದೇಶವನ್ನು ಓದಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ನಿವೃತ್ತ ಮುಖ್ಯಶಿಕ್ಷಕ ವೆಂಕಟಸ್ವಾಮಿ, ಉಪನ್ಯಾಸಕರಾದ ಡಾ.ಕೆ.ಮೋಹನ್‍ಕುಮಾರ್, ನಟರಾಜ.ಬಿ.ಎಸ್, ಸ್ವಾತಿ, ಹೇಮಲತ.ಬಿ, ಪಲ್ಲವಿವಿಜಯ್, ಆರ್.ಕಾವೇರಿ, ಈ.ಮಹಾಂತೇಶ್ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದರು. ರಂಗಸೌರಭ ಕಲಾವಿದರು ರಂಗ ಗೀತೆಗಳನ್ನು ಹಾಡಿದರು. ಪ್ರಶಿಕ್ಷಣಾರ್ಥಿಗಳಾದ ಲಕ್ಷ್ಮೀ.ಟಿ ಮತ್ತು ಮಮತ.ಬಿ ಪ್ರಾರ್ಥಿಸಿದರು.