ದೆಹಲಿ ಮಾರ್ಚ್ 28 : ಹೋಳಿ ಹಬ್ಬದ ಮುನ್ನಾದಿನದಂದು (ಮಾರ್ಚ್ 24) ದೆಹಲಿಯ ಬವಾನಾ ಪ್ರದೇಶದಲ್ಲಿ ವ್ಯಕ್ತಿಯೊಬ್ಬ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಕೊಲೆಯ ನಂತರ, ವ್ಯಕ್ತಿ ಊರಿನಿಂದ ಓಡಿಹೋಗುವ ಮೊದಲು ಆಕೆಯ ದೇಹವನ್ನು ಕಾರ್ಖಾನೆಯಲ್ಲಿ ಬಚ್ಚಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 24 ರಂದು, ಎಲ್ಲರೂ ಹೋಲಿಕಾ ದಹನ್‌ನ ಆಚರಿಸುತ್ತಿರುವಾಗ, ದೆಹಲಿಯ ಬವಾನಾ ಪೊಲೀಸ್ ಠಾಣೆಗೆ ರಾತ್ರಿ 10:27 ರ ಸುಮಾರಿಗೆ ಸೆಕ್ಟರ್ 1, ಬವಾನಾದಿಂದ 5 ವರ್ಷದ ಬಾಲಕಿಯ ಅಪಹರಣದ ಬಗ್ಗೆ ಶಂಕಿತ ಕರೆ ಬಂದಿತ್ತು. ಟೀ ಅಂಗಡಿ ನಡೆಸುತ್ತಿರುವ ಬಾಲಕಿಯ ಪೋಷಕರು, ಸಂಜೆ 5 ಗಂಟೆ ಸುಮಾರಿಗೆ ಆಕೆಯನ್ನು ಕೊನೆಯ ಬಾರಿಗೆ ನೋಡಿದ್ದೇವೆ. ಅವಳನ್ನು ಹುಡುಕಲು ಪ್ರಯತ್ನಿಸಿದ್ದು, ಇಲ್ಲಿವರೆಗೆ ಸಿಕ್ಕಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೋಷಕರೊಂದಿಗ ಹುಡುಕಾಟ ಆರಂಭಿಸಿದ್ದಾರೆ. ಬಾಲಕಿ ಕೊನೆಯದಾಗಿ ಕಾಣಿಸಿದ ಪ್ರದೇಶಗಳ ಸುತ್ತ ರಾತ್ರಿಯಿಡೀ ಹುಡುಕಾಟ ನಡೆಸಲಾಯಿತು. ಆದರೆ ಅವಳು ಪತ್ತೆಯಾಗಲಿಲ್ಲ. ಹೋಳಿ ಹಬ್ಬದ ಮುನ್ನಾದಿನದಂದು ಈ ಪ್ರದೇಶದಲ್ಲಿ ಕಾರ್ಖಾನೆಗಳನ್ನು ಮುಚ್ಚಲಾಗಿತ್ತು. ಸಿಸಿಟಿವಿ ದೃಶ್ಯಾವಳಿಯಲ್ಲಿ ಸಿಕ್ಕಿತು ಸುಳಿವು
ಮರುದಿನ ಬೆಳಿಗ್ಗೆ, ಮಾರ್ಚ್ 25 ರಂದು, ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅವುಗಳಲ್ಲಿ ಒಂದರಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಹುಡುಗಿ ನಡೆದುಕೊಂಡು ಹೋಗುವುದು ಕಾಣಿಸಿದೆ. ಬಾಲಕಿಯ ಪೋಷಕರು ವ್ಯಕ್ತಿಯನ್ನು ಗುರುತಿಸಿ ಆತ ತೋಟನ್ ಎಂದು ಹೇಳಿದ್ದಾರೆ.
ಆತನನ್ನು ಬಂಧಿಸಲು ಪೊಲೀಸರು ತೋಟನ್‌ನ ಕೆಲಸದ ಸ್ಥಳಕ್ಕೆ ಹೋದರು, ಅಲ್ಲಿಯೇ ಆತ ವಾಸಿಸುತ್ತಿದ್ದ. ಆದರೆ, ಅಷ್ಟರಲ್ಲಾಗಲೇ ಆತ ಪರಾರಿಯಾಗಿದ್ದ. ಆತನ ಬಗ್ಗೆ ಗೊತ್ತಿರುವ ಕೆಲವು ಕಾರ್ಮಿಕರನ್ನು ವಿಚಾರಣೆಗೊಳಪಡಿಸಿದ ನಂತರ, ತೋಟನ್ ನವದೆಹಲಿ ರೈಲು ನಿಲ್ದಾಣದಿಂದ (ಎನ್‌ಡಿಎಲ್‌ಎಸ್) ಹೌರಾಕ್ಕೆ ಪೂರ್ವ ಎಕ್ಸ್‌ಪ್ರೆಸ್ ಹತ್ತಲು ಹೋಗುತ್ತಿದ್ದನೆಂದು ಪೊಲೀಸರು ಕಂಡುಕೊಂಡರು.
ಎನ್‌ಡಿಎಲ್‌ಎಸ್ ತಲುಪಲು ತಕ್ಷಣವೇ ಪೊಲೀಸ್ ತಂಡವನ್ನು ರಚಿಸಲಾಯಿತು.ಆದರೆ ಅವರು ಅಲ್ಲಿಗೆ ತಲುಪುವ ವೇಳೆಗೆ ರೈಲು ಈಗಾಗಲೇ ಹೊರಟಿತ್ತು.
ಮಾರ್ಚ್ 26ರಂದು ಬೆಳಗ್ಗೆ ಪೊಲೀಸ್ ತಂಡವೊಂದು ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ತೆರಳಿತ್ತು. ಅಲ್ಲಿಗೆ ತಲುಪಿದ ನಂತರ, ಅವರು ಅಸನ್ಸೋಲ್ ರೈಲು ನಿಲ್ದಾಣಕ್ಕೆ ರೈಲು ಹತ್ತಿ ಪೂರ್ವ ಎಕ್ಸ್‌ಪ್ರೆಸ್‌ಗಾಗಿ ಕಾಯುತ್ತಿದ್ದರು. ರೈಲು ಬರುತ್ತಿದ್ದಂತೆಯೇ ಅದರಲ್ಲಿ ಹತ್ತಿ ಆರೋಪಿಯನ್ನು ಹುಡುಕಿದ್ದು ಕೆಲವು ನಿಮಿಷಗಳ ಹುಡುಕಾಟದ ಆತ ಸಿಕ್ಕಿಬಿದ್ದ. ಮಾರ್ಚ್ 27 ರಂದು ಪೊಲೀಸರು ಆತನನ್ನು ದೆಹಲಿಗೆ ಕರೆತಂದಿದ್ದಾರೆ.
ಆರೋಪಿ ತೋಟನ್, ಮಾರ್ಚ್ 24 ರಂದು ರಾತ್ರಿ 7:30 ರ ಸುಮಾರಿಗೆ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಂದು ಶವವನ್ನು ಬವಾನಾದ ಕಾರ್ಖಾನೆಯಲ್ಲಿ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ಬಳಿಕ ಬಾಲಕಿಯ ಶವ ಪತ್ತೆಯಾಗಿದ್ದು, ಬ್ಲೇಡ್ ಹಾಗೂ ಇಟ್ಟಿಗೆ ಪತ್ತೆಯಾಗಿದೆ. ಪೋಕ್ಸೊ ಕಾಯಿದೆ, ಸೆಕ್ಷನ್ 302 (ಕೊಲೆ) ಮತ್ತು 376 (ಅತ್ಯಾಚಾರಕ್ಕೆ ಶಿಕ್ಷೆ) ಸೇರಿದಂತೆ ಇತರ ಸೆಕ್ಷನ್ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.