ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರ ಆಯ್ಕೆಗೆ ಮಾರ್ಚ್. 28 ಗುರುವಾರದಂದು ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸ್ವೀಕರಿಸಲಾಗುತ್ತಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ನಂ.18 ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಸ್ಥಾನ ಪರಿಶಿಷ್ಟ ಜಾತಿ ಮೀಸಲಾಗಿದೆ. ಚುನಾವಣಾಧಿಕಾರಿಗಳ ಕಾರ್ಯಾಲಯವನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಥಾಪಿಸಲಾಗಿದೆ.
ನಾಮಪತ್ರಗಳನ್ನು ಉಮೇದುವಾರರು ಅಥವಾ ಅವರ ಸೂಚಕರು ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಯಾದ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರಿಗೆ ಸಲ್ಲಿಸಬಹುದು.
ಸಾರ್ವತ್ರಿಕ ರಜಾದಿನ ಹೊರತುಪಡಿಸಿ ಏಪ್ರಿಲ್ 4 ವರೆಗೆ ಪ್ರತಿದಿನ ಬೆಳಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ನಾಮಪತ್ರ ಸ್ವೀಕರಿಸಲಾಗುವುದು.