ಬೆಂಗಳೂರು, (ಮಾರ್ಚ್ 28) : ಕರ್ನಾಟಕ ಕಾಂಗ್ರೆಸ್ ಪಾಳೆಯದಲ್ಲಿ ಕೋಲಾರ ಕಾಳಗದ ಕೋಲಾಹಲ ಎದ್ದಿದೆ. ಟಿಕೆಟ್ ಘೋಷಣೆ ಆಗ್ಬೇಕಿರೋ ಕೋಲಾರ ಲೋಕಸಭಾ ಕ್ಷೇತ್ರದ ಸಚಿವ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವಿನ ಗುದ್ದಾಟ ಜೋರಾಗಿದೆ.
ಇಂದು (ಮಾರ್ಚ್ 28) ಮುಖ್ಯಮಂತ್ರಿ ಅವರ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ನೇತೃತ್ವದಲ್ಲಿ ಸಂಧಾನ ಸಭೆ ಯಶಸ್ವಿಯಾಗಿದೆ. ಎಷ್ಟು ಭಿನ್ನಾಭಿಪ್ರಾಯಗಳಿದ್ದರೂ ಸರಿಯಾಗಬಹುದು. ಸಿಎಂ, ಡಿಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು. ಸಿಎಂ, ಡಿಸಿಎಂ ನಿರ್ಧಾರಕ್ಕೆ ಬದ್ಧ ಎಂದ ಸಚಿವ ಸುಧಾಕರ್
ಸಿಎಂ ನಿವಾಸ ಕಾವೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಸಿ.ಸುಧಾಕರ್, ಎಷ್ಟು ಭಿನ್ನಾಭಿಪ್ರಾಯಗಳಿದ್ದರೂ ಸರಿಪಡಿಸಬಹುದು. ಸಿಎಂ, ಡಿಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ನಮ್ಮಿಂದ ಪಕ್ಷಕ್ಕೆ ಹಾನಿಯಾಗಲು ಅವಕಾಶ ನೀಡುವುದಿಲ್ಲ. ಪಕ್ಷದ ಆದೇಶಕ್ಕೆ ಗೌರವ ಕೊಟ್ಟು ಅವರು ಹೇಳಿದಂತೆ ನಡೆದುಕೊಳ್ಳುತ್ತೇವೆ.
ನಿನ್ನೆ (ಮಾರ್ಚ್ 28) ಆದಂತ ಸಮಸ್ಯೆ ಬಗ್ಗೆ ಸಿಎಂ, ಡಿಸಿಎಂ ಬಳಿ ಹೇಳಿಕೊಂಡಿದ್ದೇವೆ. ರಾಜೀನಾಮೆ ನೀಡಲು ಮುಂದಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.
ಕೊನೆಯ ಹಂತದಲ್ಲಿ ಈ ಗೊಂದಲಗಳು ಆಗಬಾರದಿತ್ತು. ನಾಯಕರ ಸೂಚನೆಗೆ ನಾವು ಬದ್ದ. ಇದು ಎಡಗೈ, ಬಲಗೈ ಸಂಘರ್ಷ ಅಲ್ಲ. ಕೆಲವರ ಅಭಿಪ್ರಾಯ ಸಂಖ್ಯೆ ಜಾಸ್ತಿ ಇದೆ ಕೊಡಿ ಅಂತ ಇತ್ತು. ಅದೊಂದು ಕೆಟ್ಟ ಘಳಿಗೆ. ಅಂತಿಮವಾಗಿ ಪಕ್ಷದ ಅಭ್ಯರ್ಥಿ ಗೆಲ್ಲಬೇಕು. ಈ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇವೆ.
ಇದರಿಂದ ಪಕ್ಷಕ್ಕೆ ಮುಜುಗರ ಆಗಿದೆ. ನಾವು ಕ್ಷಮೆ ಕೇಳಿದ್ದೇವೆ, ಯಾವುದೇ ಅಭ್ಯರ್ಥಿಯ ಬಗ್ಗೆ ಚರ್ಚೆ ಆಗಿಲ್ಲ. ಆದ್ರೆ ಯಾರಿಗೆ ಟಿಕೆಟ್ ಕೊಟ್ರೂ ಒಂದಾಗಿ ಕೆಲಸ ಮಾಡ್ತೀವಿ. ನಮ್ಮ ಜಗಳ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಲಾಭ ಆಗಲ್ಲ. ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ವಿಶ್ವಾಸವಿದೆ.
ಹಾಗದ್ರೆ ಕೋಲಾರ ಕಾಂಗ್ರಸ್ ಅಭ್ಯರ್ಥಿ ಯಾರು ? ಸಚಿವ ಕೆ.ಎಚ್.ಮುನಿಯಪ್ಪ ಅಳಿಯನಿಗೆ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಖಚಿತವಾಗುತ್ತಿದ್ದಂತೆಯೇ ರಮೇಶ್ ಕುಮಾರ್ ಬಣದ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ಶಾಸಕ, ವಿಧಾನಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಹೋಗಿದ್ದರು.
ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಕೋಲಾರ ನಾಯಕರ ಜೊತೆ ಸಂಧಾನ ಸಭೆ ಮಾಡಿದ್ದು, ಸಭೆ ಫಲಪ್ರದವಾಗಿದೆ. ಸಿಎಂ, ಡಿಸಿಎಂ ಮತ್ತು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ರಮೇಶ್ ಕುಮಾರ್ ಬಣದ ನಾಯಕರು ಹೇಳುತ್ತಿದ್ದಾರೆ. ಆದರೆ, ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಮುನಿಯಪ್ಪ ಅಳಿಯನಿಗೆ ಟಿಕೆಟ್ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಇಷ್ಟೆಲ್ಲಾ ಕೋಲಾಹಲ ನಡೆದಿದೆ. ಹೀಗಾಗಿ ಹೈಕಮಾಂಡ್, ಬೇರೆಯವರಿಗೆ ಟಿಕೆಟ್ ನೀಡುತ್ತೋ ಅಥವಾ ಅದೇ ಮುನಿಯಪ್ಪನವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಮಣೆ ಹಾಕುತ್ತೋ ಎನ್ನುವುದೇ ತೀವ್ರ ಕುತೂಹಲ ಮೂಡಿಸಿದೆ. ಒಂದು ವೇಳೆ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡಿದರೆ, ರಮೇಶ್ ಕುಮಾರ್ ಬಣ ನಾಯಕರು ಸುಮ್ಮನೆ ಇರುತ್ತಾರಾ ಅಥವಾ ಚುನಾವಣೆಯಲ್ಲಿ ಸೈಲೆಂಟ್ ಆಗುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.