ಬೆಂಗಳೂರಿನ ಭೀಕರ ನೀರಿನ ಸಮಸ್ಯೆ ಪರಿಹಾರಕ್ಕೆ ಕೆರೆಗಳಿಗೆ ನೀರು ತುಂಬಿಸುವುದು, ಸಮುದಾಯ ಮಳೆ ನೀರು ಕೊಯ್ಲು ಸೇರಿದಂತೆ ಹಲವು ಯೋಜನೆಗಳ ಅನುಷ್ಠಾನಗೊಳಿಸುವುದಾಗಿ ಹೇಳುತ್ತಿದೆ, ಆದರೆ ಇದಕ್ಕೆ ಎಲ್ಲಿಂದ ಹಣ ತರುತ್ತದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ನಗರದ ಒಂದೂವರೆ ಕೋಟಿ ನಾಗರಿಕರಿಗೆ ಕುಡಿಯುವ ನೀರು ಪೂರೈಕೆಯ ಜವಾಬ್ದಾರಿಯನ್ನು ಜಲಮಂಡಳಿಯು ಹೊಂದಿದೆ. ಕಳೆದೊಂದು ತಿಂಗಳಿನಿಂದ ಬೆಂಗಳೂರಿನ ಜನರು ಹಿಂದೆಂದೂ ಕಾಣದ ಭೀಕರ ಜಲಕ್ಷಾಮಕ್ಕೆ ತುತ್ತಾಗಿದ್ದಾರೆ. ನೀರಿನ ಸಮಸ್ಯೆ ಪರಿಹಾರಕ್ಕೆ ಮಾರ್ಗ ದೊರೆಯದೇ ಅಧಿಕಾರಿ ವರ್ಗ ಅಕ್ಷರಶಃ ಕೈಚಲ್ಲಿ ಕುಳಿತುಕೊಂಡಿದೆ.
ಬೆಂಗಳೂರು ಜಲಮಂಡಳಿಯ ಅಧಿಕಾರಿಗಳು ನಗರದ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಿ ಅಂತರ್ಜಲ ವೃದ್ಧಿಗೆ ಯೋಜನೆ ರೂಪಿಸುತ್ತೇವೆ, ಸಮುದಾಯ ಮಳೆ ನೀರು ಕೊಯ್ಲು ಯೋಜನೆ ಅನುಷ್ಠಾನ ಮಾಡುತ್ತೇವೆ, ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಂಡು ನೀರಿನ ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸಲಾಗುವುದು ಎಂದು ಹೇಳುತ್ತಿದ್ದಾರೆ. ಆದರೆ, ವಾಸ್ತವಾಗಿ ಬೆಂಗಳೂರು ಜಲಮಂಡಳಿ ಪ್ರತಿ ತಿಂಗಳು ನಿರ್ವಹಣೆಗೆ ಹಣದ ಕೊರತೆ ಅನುಭವಿಸುತ್ತಿದೆ.
ಎಸ್‌ಟಿಪಿಗಳ ರಿಪೇರಿಗೆ ಹೆಣಗಾಟ : ಬೆಂಗಳೂರು ಜಲಮಂಡಳಿಯು ಸುಮಾರು 32 ತ್ಯಾಜ್ಯ ನೀರು ಶುದ್ಧಿಕರಣ ಘಟಕಗಳನ್ನು ಹೊಂದಿದೆ. ಈ ಘಟಕಗಳನ್ನು ಎನ್‌ಜಿಟಿ ಮಾನದಂಡದಂತೆ ಮೇಲ್ದರ್ಜೆಗೆ ಏರಿಸುವಂತೆ ಸೂಚಿಸಲಾಗಿದೆ. ಮೇಲ್ದರ್ಜೆ ಏರಿಸುವ ಕಾಮಗಾರಿ ನಡೆಸುವುದಕ್ಕೂ ಬೆಂಗಳೂರು ಜಲಮಂಡಳಿಯ ಬಳಿ ಹಣ ಇಲ್ಲ. ಹೀಗಾಗಿ, ಹಂತ ಹಂತವಾಗಿ ಮೇಲ್ಚರ್ಜೆ ಏರಿಸುವ ಕಾರ್ಯ ಮಾಡುತ್ತಿದೆ. ಹೀಗಿರುವಾಗ ಹೊಸ ಯೋಜನೆಗಳಿಗೆ ಎಲ್ಲಿಂದ ಹಣ ತೆಗೆದುಕೊಂಡು ಬರಲಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಪ್ರತಿ ತಿಂಗಳೂ ₹15 ಕೋಟಿ ಕೊರತೆ : ಜಲಮಂಡಳಿಯು 10 ಲಕ್ಷಕ್ಕೂ ಅಧಿಕ ನೀರಿನ ಸಂಪರ್ಕಗಳನ್ನು ಹೊಂದಿದೆ. ಗ್ರಾಹಕರಿಂದ ಸುಮಾರು ₹131 ಕೋಟಿ ಪ್ರತಿ ತಿಂಗಳು ನೀರಿನ ಶುಲ್ಕ ವಸೂಲಿ ಮಾಡುತ್ತಿದೆ. ಈ ಪೈಕಿ ₹68 ಕೋಟಿ ವಿದ್ಯುತ್ ಬಿಲ್‌ಗೆ ಪಾವತಿ ಮಾಡುತ್ತಿದೆ. ₹40 ಕೋಟಿ ಅಧಿಕಾರಿ ಸಿಬ್ಬಂದಿ ವೇತನಕ್ಕೆ, ₹10 ಕೋಟಿ ಸಾಲ ಮರುಪಾವತಿಗೆ, ₹15 ಕೋಟಿ ಎಸ್‌ಟಿಪಿಗಳ ನಿರ್ವಹಣೆಗೆ, ₹2 ಕೋಟಿ ಆಡಳಿತಕ್ಕೆ, ₹2.5 ಕೋಟಿಯನ್ನು ನೀರಿನ ಸಂಸ್ಕರಣಾ ಘಟಕದ ನಿರ್ವಹಣೆಗೆ ಹಾಗೂ ಇತರೆ ನಿರ್ವಹಣಾ ವೆಚ್ಚಕ್ಕೆ ₹7.5 ಕೋಟಿ ವೆಚ್ಚ ಮಾಡುತ್ತಿದೆ. ಆದಾಯಕ್ಕಿಂತ ಸುಮಾರು ₹15 ಕೋಟಿ ವೆಚ್ಚ ಹೆಚ್ಚಾಗಿದೆ. ಹೀಗಾಗಿ, ನಿರ್ವಹಣೆಗೆ ಸಂಬಂಧಿಸಿದ ಹಣ ಪಾವತಿಯನ್ನು ಎರಡು ತಿಂಗಳು ವಿಳಂಬ ಮಾಡಲಾಗುತ್ತಿದೆ.