ಜೈಪುರ : ರಿಯಾನ್ ಪರಾಗ್ ಅವರ ಸ್ಫೋಟಕ ಅರ್ಧಶತಕ ಮತ್ತು ಬೌಲರ್‌ಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 12 ರನ್‌ಗಳ ಜಯ ಸಾಧಿಸಿದೆ.
ಗೆಲ್ಲಲು 186 ರನ್‌ಗಳ ಗುರಿಯನ್ನು ಪಡೆದ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 173 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಸತತ ಎರಡು ಪಂದ್ಯಗಳನ್ನು ಗೆದ್ದ ರಾಜಸ್ಥಾನ 4 ಸಂಪಾದಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಮುಂದುವರಿದಿದೆ.
ಕೊನೆಯ 18 ಎಸೆತಗಳಲ್ಲಿ ಡೆಲ್ಲಿ ತಂಡಕ್ಕೆ 41 ರನ್‌ಗಳ ಅಗತ್ಯವಿತ್ತು. 18ನೇ ಓವರ್‌ನಲ್ಲಿ ಅವೇಶ್ ಖಾನ್ 9 ರನ್, 19ನೇ ಓವರ್‌ನಲ್ಲಿ ಸಂದೀಪ್ ಶರ್ಮಾ 15 ರನ್ ಕೊಟ್ಟರೆ ಕೊನೆಯ ಓವರ್‌ನಲ್ಲಿ ಅವೇಶ್ ಖಾನ್ ಕೇವಲ 4 ರನ್ ನೀಡಿದ್ದರಿಂದ ರಾಜಸ್ಥಾನ ಗೆಲುವು ಸಾಧಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಆರಂಭ ಉತ್ತಮವಾಗಿತ್ತು. ಮಿಚೆಲ್ ಮಾರ್ಷ್ 23 ರನ್ (12 ಎಸೆತ, 5 ಬೌಂಡರಿ) ಹೊಡೆದು ಔಟಾದರು. ನಂತರ ರಿಕಿ ಭುಯಿ ಸೊನ್ನೆ ಸುತ್ತಿದರು.
ನಾಯಕ ರಿಷಭ್ ಪಂತ್ 28 ರನ್ (26 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದರೆ, ಆರಂಭಿಕ ಆಟಗಾರ ಡೇವಿಡ್ ವಾರ್ನರ್ 49 ರನ್(34 ಎಸೆತ, 5 ಬೌಂಡರಿ, 3 ಸಿಕ್ಸರ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಅಕ್ಷರ್ ಪಟೇಲ್ ಮುರಿಯದ 6ನೇ ವಿಕೆಟಿಗೆ 27 ಎಸೆತದಲ್ಲಿ 51 ರನ್ ಜೊತೆಯಾಟವಾಡಿದರೂ ತಂಡಕ್ಕೆ ಜಯ ದಕ್ಕಲಿಲ್ಲ.
ಟ್ರಿಸ್ಟಾನ್ ಸ್ಟಬ್ಸ್ ಔಟಾಗದೇ 44 ರನ್ (23 ಎಸೆತ, 2 ಬೌಂಡರಿ, 3 ಸಿಕ್ಸರ್) ಹೊಡೆದರೆ ಅಕ್ಷರ್ ಪಟೇಲ್ ಔಟಾಗದೇ 15 ರನ್ (13 ಎಸೆತ, 1 ಬೌಂಡರಿ) ಹೊಡೆದರು. ಆರಂಭದಲ್ಲೇ ಕುಸಿತ: ರಾಜಸ್ಥಾನ 36 ರನ್ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು. ಯಶಸ್ವಿ ಜೈಸ್ವಾಲ್ 5 ರನ್, ಜೋಸ್ ಬಟ್ಲರ್ 11 ರನ್, ನಾಯಕ ಸಂಜು ಸ್ಯಾಮ್ಸನ್ 15 ರನ್ ಗಳಿಸಿ ಔಟಾಗಿದ್ದರು.
ಈ ಹಂತದಲ್ಲಿ ಬೌಲರ್ ಅಶ್ವಿನ್ ಸ್ಫೋಟಕ ಬ್ಯಾಟ್ ಮಾಡಿ 19 ಎಸೆತಗಳಲ್ಲಿ 29 ರನ್ (3 ಸಿಕ್ಸರ್) ಸಿಡಿಸಿ ಚೇತರಿಕೆ ನೀಡಿದರು. ವಿಕೆಟ್ ಉರುಳುತ್ತಿದ್ದರೂ ರಿಯನ್ ಪರಾಗ್ ಸಿಡಿಲಬ್ಬರದ ಬ್ಯಾಟ್ ಬೀಸಿದ ಪರಿಣಾಮ ರಾಜಸ್ಥಾನ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು.
34 ಎಸೆತದಲ್ಲಿ ಅರ್ಧಶತಕ ಹೊಡೆದ ಪರಾಗ್ ಅಂತಿಮವಾಗಿ 45 ಎಸೆತದಲ್ಲಿ ಔಟಾಗದೇ 84 ರನ್ (7 ಬೌಂಡರಿ, 6 ಸಿಕ್ಸರ್) ಹೊಡೆದರೆ ಧ್ರುವ್ ಜರೇಲ್ 20 ರನ್(12 ಎಸೆತ, 3 ಬೌಂಡರಿ) ಹೇಟ್ಮೆಯರ್ ಔಟಾಗದೇ 14 ರನ್ (7 ಎಸೆತ, 1 ಬೌಂಡರಿ, 1ಸಿಕ್ಸರ್) ಚಚ್ಚಿದರು.
ಅಶ್ವಿನ್ ಮತ್ತು ಪರಾಗ್ 37 ಎಸೆತಗಳಲ್ಲಿ 54 ರನ್ ಜೊತೆಯಾಟವಾಡಿದರೆ, ಪರಾಗ್ ಮತ್ತು ಜರೇಲ್ 23 ಎಸೆತಗಳಲ್ಲಿ 52 ರನ್ ಹೊಡೆದರು. ಅಂತಿಮವಾಗಿ ಹೇಟ್ಮೆಯರ್ ಮತ್ತು ಜರೇಲ್ ಮುರಿಯದ 6ನೇ ವಿಕೆಟಿಗೆ ಕೇವಲ 16 ಎಸೆತಗಳಲ್ಲಿ 43 ರನ್ ಜೊತೆಯಾಟವಾಡಿದ ಪರಿಣಾಮ ತಂಡದ ಮೊತ್ತ 180ರ ಗಡಿ ದಾಟಿತು.