ತೆಲುಗು ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನವೀನ್ ಪೊಲಿಶೆಟ್ಟಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅಮೆರಿಕದಲ್ಲಿ ಬೈಕ್ ಅಪಘಾತವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಬೈಕ್ ಮೂಲಕ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬೈಕ್ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿದೆ. ಈ ಅಪಘಾತದಲ್ಲಿ ನವೀನ್ ಭುಜ , ಕೈ ಹಾಗೂ ದೇಹದ ಇತರ ಭಾಗಗಳಿಗೆ ಗಾಯವಾಗಿದೆ.
ಅಮೆರಿಕದಲ್ಲಿ ನವೀನ್ ಪೊಲಿಶೆಟ್ಟಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನವೀನ್ ಚಿಕಿತ್ಸೆ ಹಾಗೂ ಆರೋಗ್ಯದ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಮೂಲಗಳ ಪ್ರಕಾರ ನವೀನ್ ಶೆಟ್ಟಿ ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಯಿಂದ ಬಿಡುಡೆಗೆ ಕೆಲ ದಿನಗಳ ಅವಶ್ಯಕತೆ ಇದೆ ಅನ್ನೋ ಮಾಹಿತಿ ಬಹಿರಂಗವಾಗಿದೆ.
ನವೀನ್ ಪೊಲಿಶೆಟ್ಟಿ ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಪಿ ಮಹೇಶ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಕಲ್ಯಾಣ್ ಶಂಕರ್ ನಿರ್ದೇಶನದ ಅನಗನಗಾ ಒಕ ರಾಜು ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರುವ ನವೀನ್ ಶೆಟ್ಟಿ ಇದೀಗ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
2012ರಲ್ಲಿ ಲೈಫ್ ಈಸ್ ಬ್ಯೂಟಿಫುಲ್ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ನವೀನ್ ಪೊಲಿಶೆಟ್ಟಿ ತೆಲುಗು ಸಿನಿಮಾದಲ್ಲಿ ಕೆಲ ಹಿಟ್ ಚಿತ್ರ ನೀಡಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
2019ರಲ್ಲಿ ತೆರೆಕಂಡ ತೆಲುಗು ಕಾಮಿಡಿ ಥ್ರಿಲ್ಲರ್ ಎಜೆಂಟ್ ಸಾಯಿ ಶ್ರೀನಿವಾಸ್ ಅತ್ರೆಯಾ ಚಿತ್ರ ಸೂಪರ್ ಹಿಟ್ ಆಗಿತ್ತು. ಬಾಲಿವುಡ್‌ನ ಚಿಚೋರಿ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.