ಬೆಂಗಳೂರು : ರಾಜ್ಯದಲ್ಲಿ ಲೋಕಸಮರ ರಾಜಕೀಯ ರಂಗೇರಿದ್ದು ಮೈತ್ರಿ ಬಳಿಕ ಇದೆ ಮೊದಲ ಬಾರಿಗೆ ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ 90ಕ್ಕೂ ಹೆಚ್ಚು ಘಟಾನುಘಟಿಗಳು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸೇರಿ ಪರಸ್ಪರ ಗೌರವಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಸುದೀರ್ಘ ಚರ್ಚೆ ನಡೆಸಿ ಲೋಕಸಭಾ ಚುನಾವಣೆಯ ಗೆಲುವಿಗೆ ಅಗತ್ಯ ರಣತಂತ್ರ ರೂಪಿಸಿದ್ದಾರೆ. ಪರಸ್ಪರ ಹೊಗಳಿಕೊಂಡ ನಾಯಕರೆಲ್ಲರ ಬಾಯಲ್ಲಿ ಮೋದಿಯನ್ನು ಮತ್ತೆ ಪ್ರಧಾನಿ ಮಾಡಬೇಕೆಂಬ ಘೋಷಣೆ ಹೊರಹೊಮ್ಮಿತು. ಇದರ ಜೊತೆ ಜೊತೆಗೆ ಕೈ ಪಡೆ ವಿರುದ್ಧ ವಾಗ್ದಾಳಿ ನಡೆಸಿದರು. ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು , ಸಿಎಂ ಸಿದ್ದರಾಮಯ್ಯ ಗರ್ವಭಂಗಕ್ಕೆ ಕರೆ ಕೊಟ್ಟರು. ಬಿಜೆಪಿ-ಜೆಡಿಎಸ್ ಒಂದೇ ತಾಯಿ ಮಕ್ಕಳು ಎಂದು ಯಡಿಯೂರಪ್ಪ ಬಣ್ಣಿಸಿದ್ರು. ಈ ಮೈತ್ರಿ ತಾತ್ಕಾಲಿಕ ಅಲ್ಲ ಎಂದು ಕುಮಾರಸ್ವಾಮಿ ಘೋಷಿಸಿದ್ರು. ಗೌಡರ ಆಶೀರ್ವಾದದಿಂದ ನಮಗೆ ಆನೆ ಬಲ ಬಂದತಾಗಿದೆ ಎಂದು ವಿಜಯೇಂದ್ರ ವ್ಯಾಖ್ಯಾನಿಸಿದ್ರು..
ಸಿಎಂ ವಿರುದ್ಧ ಕಿಡಿ : ಜೆಡಿಎಸ್ ಎಲ್ಲಿದೆ ಎಂದು ಸಿದ್ದರಾಮಯ್ಯ ಕೇಳುತ್ತಾರೆ. ಅವರಿಗೆ ಅಧಿಕಾರದ ಮದ ಏರಿದೆ. ಮೈಸೂರು, ಚಾಮರಾಜನಗರ ಕ್ಷೇತ್ರ ಗೆಲ್ಲುವ ಶಕ್ತಿ ನಿಮಗೆ ಇದೆ ಜಿಟಿ ದೇವೇಗೌಡರೇ. ಸಿದ್ದರಾಮಯ್ಯ ನವರ ಗರ್ವ ಭಂಗ ಆಗಬೇಕು, ಪರಸ್ಪರ ಸಹಕಾರ, ಒಗ್ಗಟ್ಟಿಗೆ ಯಡಿಯೂರಪ್ಪ ಪಾತ್ರ ಮುಖ್ಯವಾಗಿದೆ. ಹಿಂದೆ ಆಗಿದ್ದೆಲ್ಲ ಮರೆತುಬಿಡಿ, ಕಾಲ ಕ್ಷಣಿಕ. ಹಿಂದೆ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಮುಂದುವರೆಯೋಣ. ದೇಶದಲ್ಲಿ ಮೋದಿಯವರಂಥ ನಾಯಕ ಮತ್ತೊಬ್ಬರು ಇಲ್ಲ ಎಂದು ಹೆಚ್‌ಡಿ ದೇವೇಗೌಡರು ಹೇಳಿದರು.
ಒಂದೇ ತಾಯಿ ಮಕ್ಕಳು : ದೇವೇಗೌಡರು ಈ ವಯಸ್ಸಿನಲ್ಲಿ ಇಲ್ಲಿ ಬಂದು ಕುಳಿತಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎನ್ನುತ್ತಿದ್ದಾರೆ. ಮೋದಿಯವರು ಒಂದು ದಿನವೂ ವಿಶ್ರಾಂತಿ ಪಡೆಯದೇ ದೇಶದ ಸೇವೆ ಮಾಡುತ್ತಿದ್ದಾರೆ. ಇವರಿಬ್ಬರು ನಮ್ಮ ಆದರ್ಶಗಳು. ಬಿಜೆಪಿ ಜೆಡಿಎಸ್ ಬೇರೆ ಅಲ್ಲ, ನಾವು ಒಂದೇ ತಾಯಿ ಮಕ್ಕಳು. ಇದೇ ವಾತಾವರಣ ಮುಂದುವರೆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಮೈತ್ರಿ ತಾತ್ಕಾಲಿಕವಲ್ಲ : ಸಮನ್ವಯ ಸಭೆಗೆ ಕಾಲ ಇವತ್ತು ಕೂಡಿ ಬಂದಿದೆ. ನಮ್ಮ ಮೈತ್ರಿ ಬಗ್ಗೆ ಕಾಂಗ್ರೆಸ್ ಗೆ ನಡುಕ ಶುರುವಾಗಿದೆ. ನಮ್ಮ ಕಾರ್ಯಬದ್ಧತೆಯಲ್ಲಿ ಕಿಂಚಿತ್ತೂ ಅಡ್ಡಿ ಆಗಬಾರದು. ಸಣ್ಣಪುಟ್ಟ ಸಮಸ್ಯೆ ಇದ್ರೆ ಉಸ್ತುವಾರಿಗಳ ಗಮನಕ್ಕೆ ತನ್ನಿ ಇದು ತಾತ್ಕಾಲಿಕ ಮೈತ್ರಿ ಅಲ್ಲ, ಮುಂದೆಯೂ ಮುಂದುವರೆಯಬೇಕು ಎಂಬ ಉದ್ದೇಶವಿದೆ. ರಾಜ್ಯದ ಅಭಿವೃದ್ಧಿಗೆ ಈ ಮೈತ್ರಿ ಮಾಡಲಾಗಿದೆ. ಮೂರನೇ ಬಾರಿ ಎನ್‌ಡಿಎ ಸರ್ಕಾರ ಬರುವುದು ಸೂರ್ಯ ಚಂದ್ರರಷ್ಟೇ ಸ್ಪಷ್ಟ ಎಂದು ಕುಮಾರಸ್ವಾಮಿ ಹೇಳಿದರು.
ಹೆಚ್.ಡಿ.ಡಿ ಆಶೀರ್ವಾದ : ಮೋದಿಯವರು ಮತ್ತೆ ಪ್ರಧಾನಿ ಆಗಲು ದೇವೇಗೌಡರು ನಮಗೆಲ್ಲ ಆಶೀರ್ವಾದ ಮಾಡಿದ್ದಾರೆ. ಅವರ ಆಶೀರ್ವಾದ ನಮಗೆ ಆನೆ ಬಲ. ಈಗಿನ ಈ ಮೈತ್ರಿಗೆ ರಾಜ್ಯದ ಮತದಾರರ ಸಂಪೂರ್ಣ ಆಶೀರ್ವಾದ ಇದೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.