ಬೆಂಗಳೂರು: ಶನಿವಾರ ಬೆಂಬಲಿಗರ ಸಭೆ ಕರೆದು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಇಂದು ಬಿಜೆಪಿ ರಾಜ್ಯಾಧಕ್ಷ ವಿಜಯೇಂದ್ರ ಮತ್ತು ಪ್ರೀತಂ ಗೌಡ ಸುಮಲತಾ ನಿವಾಸಕ್ಕೆ ಆಗಮಿಸಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳಿಸಬೇಕು ಎಂದು ಮನವಿ ಮಾಡಿದರು.
ಭೇಟಿಯ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸುಮಲತಾ, ವಿಜಯೇಂದ್ರ, ಪ್ರೀತಂಗೌಡ ಒಂದು ಗಂಟೆಗಳ ಕಾಲ ಬಂದು ಅವರ ಭಾವನೆಯನ್ನು ಹೇಳಿ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂದು ಕೇಳಿದರು. ನಾಳೆ ಬೆಂಬಲಿಗರು ಬರುತ್ತಿದ್ದಾರೆ. ಅವರ ಭಾವನೆಯನ್ನು ಕೇಳಬೇಕಾದ ಕರ್ತವ್ಯವಿದೆ. ನಾನು ಕಾರ್ಯಕರ್ತರ ಭಾವನೆ ಕೇಳಿ ಮಂಡ್ಯದಲ್ಲಿ ನಿಲುವನ್ನು ತಿಳಿಸುತ್ತೇನೆ.
ಬಿಜೆಪಿಯನ್ನು ಬೆಂಬಲಿಸಬೇಕು ಒಂದು ಕಡೆ. ಬೆಂಬಲಿಗರು ಏನು ಹೇಳುತ್ತಾರೆ ಎನ್ನುವುದನ್ನು ಕೇಳಬೇಕು. ಮಂಡ್ಯಕ್ಕೆ ಹೋಗಿ ಅವರ ಮುಂದೆಯೇ ನಿಲುವನ್ನು ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದರು.
ಸುಲಭವಾಗಿ ಗೆಲ್ಲುವ ಕ್ಷೇತ್ರದ ಆಫರ್ ಇತ್ತು. ಬೇರೆ ಪಕ್ಷದಿಂದಲೂ ಆಫರ್ ಇತ್ತು. ಆದರೆ ನಾನು ಮಂಡ್ಯ ಬಿಟ್ಟರೇ ಮತ್ತೆಲ್ಲೂ ಹೋಗುತ್ತಿಲ್ಲ. ನನ್ನ ಅಸ್ತಿತ್ವ ಅಂದ್ರೆ ಮಂಡ್ಯ. ಅದನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಮಾತನಾಡುವುದಿಲ್ಲ.
ಭೇಟಿ ವೇಳೆ ಏನಾದ್ರೂ ಆಫರ್ ನೀಡಿದ್ರಾ ಎಂಬ ಪ್ರಶ್ನೆಗೆ, ಬೇರೆ ಏನು ಆಫರ್ ಕೊಟ್ಟಿಲ್ಲ. ಆ ರೀತಿ ಕೇಳಿ ಪಡೆಯುವ ಅಭ್ಯಾಸ ಇಲ್ಲ. ಇದ್ದಿದ್ದರೆ ನಾವು ಮುಂದೆ ಇರುತ್ತೇವೆ ಎಂದು ಸುಮಲತಾ ಹೇಳಿದರು.