ಬೆಳಗಾವಿ : ಬೆಳಗಾವಿ ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಕೂಡುಗೆ ಶೂನ್ಯ. ಹೊರ ಜಿಲ್ಲೆಯ ಅಭ್ಯರ್ಥಿ ಬದಲಿಗೆ ಮನೆ ಮಗ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಬೆಂಬಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಹಾಗೂ ಯದ್ದಲಭಾವಿಹಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಪರ ಪ್ರಚಾರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಮೃಣಾಲ್ ಹೆಬ್ಬಾಳ್ಕರ್, ನನ್ನಂತೆ, ನನ್ನ ಸಹೋದರ ನಂತೆ ಸಾಮಾಜಿಕ ಬದ್ಧತೆ ಹೊಂದಿದ್ದಾನೆ ಎಂದರು.
ಕೋವಿಡ್ ಸಂದರ್ಭದಲ್ಲಿ ಬೆಳಗಾವಿಗೆ ಬರಬೇಕಿದ್ದ ಆಕ್ಸಿಜನ್ ಸಿಲಿಂಡರ್ ಗಳನ್ನು ಧಾರವಾಡಕ್ಕೆ ಸ್ಥಳಾಂತರಿಸಲಾಯಿತು. ಇದಕ್ಕೆ ಶೆಟ್ಟರ್ ಅವರ ಕುಮ್ಮಕ್ಕೆ ಕಾರಣ. ಸ್ಥಳೀಯರ ಸಮಸ್ಯೆಗಳನ್ನು ಅರಿಯದ ಶೆಟ್ಟರ್ ಓರ್ವ ಸ್ವಾರ್ಥ ರಾಜಕಾರಣಿ ಎಂದರು. ಹೊರಗಡೆಯ ವ್ಯಕ್ತಿ ಯಾವತ್ತಿಗೂ ಹೊರಗಡೆಯವರೇ, ಮನೆ ಮಗ ಎಂದಿಗೂ ಮನೆ ಮಗನೇ ಎಂದು ಹೇಳಿದರು.
ನಾನು 24 ವರ್ಷಗಳ ಹಿಂದೆ ಖಾನಾಪುರದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ ರಾಜಕೀಯ ಜೀವನ ಆರಂಭಿಸಿದೆ. ಇಂದು ಏಳು ಕೋಟಿ ಜನಸಂಖ್ಯೆಯ ಕರ್ನಾಟಕ ರಾಜ್ಯದಲ್ಲಿ ಏಕೈಕ ಮಹಿಳಾ ಮಂತ್ರಿಯಾಗಿರುವೆ. ಇದಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಾಗೂ ಆ ದೇವರ ಆಶೀರ್ವಾದವೇ ಕಾರಣ. ಇದೇ ರೀತಿ ನನ್ನ ಮಗನಿಗೂ ನಿಮ್ಮ ಆಶೀರ್ವಾದ ಇರಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ, ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್, ಶಂಕರಗೌಡ ಪಾಟೀಲ, ಮಹೇಶ ಸುಗಣೆನ್ನವರ, ನಾಗೇಶ್ ದೇಸಾಯಿ, ದತ್ತಾ ಬಂಡಿಗೆನಿ, ಫಕೀರವ್ವ ಅಮ್ಮಪೂರ್, ಲಕ್ಷ್ಮೀ ನಾರಾಯಣ, ರುದ್ರಪ್ಪ, ಉದಯ ಕೆಸರೂರ್, ಮಂಜು ಪೂಜೇರಿ, ಬಸವರಾಜ ನೇಸರಗಿ, ಅಡಿವೆಪ್ಪ ಮಿಸಿನಾಯಕ್, ಪ್ರಕಾಶ್ ಉದ್ದನ್ನವರ, ಯಲ್ಲಪ್ಪ ಹೊಳೆಪ್ಪಗೋಳ, ಯಲ್ಲ ಬೋರಾಮರದ್ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.