ರಾಮನಗರ: ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ಅವರನ್ನು ಗೆಲ್ಲಿಸಲು ಚುನಾವಣಾ ಚಾಣಕ್ಯ ಅಮಿತ್ ಶಾ ಖುದ್ದು ಅಖಾಡಕ್ಕಿಳಿಯುತ್ತಿದ್ದಾರೆ. ಡಿ.ಕೆ.ಬ್ರದರ್ಸ್‌ಗೆ ಠಕ್ಕರ್ ನೀಡಲು ಬಿಜೆಪಿ ರಣತಂತ್ರ ಹಣೆದಿದ್ದು, ಮೈತ್ರಿ ನಾಯಕರು ಬೃಹತ್ ರೋಡ್ ಶೋ ಮೂಲಕ ಶಕ್ತಿಪ್ರದರ್ಶನಕ್ಕೆ ಸಿದ್ಧತೆ ಆರಂಭಿಸಿದ್ದಾರೆ.
ಹೌದು. ಬೆಂಗಳೂರು ಗ್ರಾಮಾಂತರ ಹೈವೋಲ್ಟೇಜ್ ಕ್ಷೇತ್ರದಲ್ಲಿ ಲೋಕಸಮರ ತೀವ್ರಗೊಳ್ಳುತ್ತಿದೆ. ಮೊನ್ನೆಯಷ್ಟೇ ನಾಮಪತ್ರ ಸಲ್ಲಿಕೆ ಮೂಲಕ ಬೃಹತ್ ರ‍್ಯಾಲಿ ಮಾಡಿ ಶಕ್ತಿ ಪ್ರದರ್ಶನ ಮಾಡಿದ್ದ ಕಾಂಗ್ರೆಸ್‌ಗೆ ಠಕ್ಕರ್ ಕೊಡಲು ಮೈತ್ರಿ ಪಕ್ಷ ಸಿದ್ಧತೆ ಆರಂಭಿಸಿದೆ. ಖುದ್ದು ಬೆಂಗಳೂರು ಗ್ರಾಮಾಂತರ ಅಖಾಡಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಎಂಟ್ರಿ ನೀಡುತ್ತಿದ್ದು, ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ. ಏಪ್ರಿಲ್ 1ರ ರಾತ್ರಿ ಅಮಿತ್ ಶಾ ಬೆಂಗಳೂರಿಗೆ ಅಗಮಿಸಲಿದ್ದಾರೆ.
ಏ.2 ರಂದು ಬೆಳಗ್ಗೆ 9 ಗಂಟೆಗೆ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ನಾಯಕರೊಂದಿಗೆ ಸಭೆ ಮಾಡಲಿದ್ದಾರೆ. ಬಳಿಕ ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ, ಬೆಂ. ಗ್ರಾಮಾಂತರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಒಳಗೊಂಡು ಸಮಾವೇಶ ಮಾಡಲಿದ್ದಾರೆ. ಮಧ್ಯಾಹ್ನ 2 ರಿಂದ 4ಗಂಟೆವರೆಗೂ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರದ ಪ್ರಮುಖರ ಸಭೆ ನಡೆಸುವ ಮೂಲಕ ಚುನಾವಣೆ ಗೆಲುವಿಗೆ ರಣತಂತ್ರ ಮಾಡಲಿದ್ದಾರೆ.
ಬೆಂಗಳೂರಿನಲ್ಲಿ ಸಮಾವೇಶದ ಬಳಿಕ ಸಂಜೆ 6ಗಂಟೆಗೆ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಿ ಬಹಿರಂಗ ಸಮಾವೇಶ ನಡೆಸಲಿದ್ದಾರೆ. ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ್ ಪರವಾಗಿ ಮತಯಾಚನೆ ಮಾಡಲಿರುವ ಅಮಿತ್ ಶಾಗೆ ಹೆಚ್‌ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ, ವಿಜಯೇಂದ್ರ, ಅಶೋಕ್ ಸೇರಿದಂತೆ ಬಿಜೆಪಿ, ಜೆಡಿಎಸ್ ಸ್ಥಳೀಯ ನಾಯಕರು ಸಾಥ್ ನೀಡಲಿದ್ದಾರೆ.