ಗುವಾಹಟಿ : ಲೋಕಸಭಾ ಚುನಾವಣಾ ಸಮೀಪಿಸುತ್ತಿರುವ ಹೊತ್ತಿನಲ್ಲೇ ಅಸ್ಸಾಂ ಸಿಎಂ ಹಿಮಂತ ನಿಸ್ವಾ ಶರ್ಮಾ ಅವರು ಸಂಸದರೂ ಆಗಿರುವ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಧುಬ್ರಿ ಸಂಸದರು ಮತ್ತೆ ಮದುವೆಯಾಲು ಬಯಸಿದ್ದರೆ ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ಮದುವೆಯಾಗಲಿ. ಇಲ್ಲದಿದ್ದರೆ ಬಂಧನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಶನಿವಾರ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನನಗೆ ಇನ್ನೂ ತುಂಬಾ ಶಕ್ತಿ ಇದೆ, ನಾನು ಮದುವೆಯಾಗುತ್ತೇನೆ. ಮುಖ್ಯಮಂತ್ರಿ ಬಯಸದಿದ್ದರೂ ನಾನು ಆ ಕೆಲಸ ಮಾಡಬಲ್ಲೆ ಅದು ನನ್ನ ಶಕ್ತಿ ಅಷ್ಟೆ ಎಂಬ ಬದ್ರುದ್ದೀನ್ ಅಜ್ಮಲ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ. ಆಗ ಬಹುಪತ್ನಿತ್ವ ಕಾನೂನು ಬಾಹಿರವಾಗಲಿದೆ. ಆಮೇಲೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಈಗಾಗಲೇ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲಾಗಿದೆ.
ಈ ಕಾನೂನಿನ ಅನ್ವಯ ರಾಜ್ಯದ ಮುಸ್ಲಿಮರು ಸೇರಿದಂತೆ ಎಲ್ಲಾ ಧರ್ಮದವರು 2ನೇ ವಿವಾಹವಾಗುವುದು ಅಪರಾಧವಾಗುತ್ತದೆ. ಒಬ್ಬ ವ್ಯಕ್ತಿಗೆ ಒಂದು ಮದುವೆಗೆ ಮಾತ್ರ ಕಾನೂನಿನ ಮಾನ್ಯತೆ ಇರಲಿದೆ. ಹಾಲಿ ಷರಿಯಾ ಕಾನೂನಿನಡಿ ಮುಸ್ಲಿಮರು ಕಾನೂನು ಬದ್ಧವಾಗಿಯೇ 3 ವಿವಾಹವಾಗುವ ಅವಕಾಶವಿದೆ. ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವ ಎಲ್ಲಾ ವಿಚಾರದಲ್ಲಿ ಎಲ್ಲಾ ಧರ್ಮದ ಜನರಿಗೆ ಒಂದೇ ನಿಯಮ ಅನ್ವಯವಾಗುತ್ತದೆ.