ಕೋಲ್ಕತ್ತ, ಏಪ್ರಿಲ್ 1 : ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಭಾನುವಾರ ಭೀಕರ ಬಿರುಗಾಳಿಯ ಪರಿಣಾಮ ವ್ಯಾಪಕ ಹಾನಿ ಸಂಭವಿಸಿದೆ. ಬಿರುಗಾಳಿಯ ಪ್ರಭಾವದಿಂದ ಹಲವಾರು ಮನೆಗಳು ಮತ್ತು ಮರಗಳು ನೆಲಸಮಗೊಂಡಿವೆ. ಐದು ಮಂದಿ ಮೃತಪಟ್ಟಿದ್ದು, 500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಲ್ಪೈಗುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಪತ್ತು ಸಂಭವಿಸಿದೆ. ಇದರ ಪರಿಣಾಮವಾಗಿ ಹಲವಾರು ಮನೆಗಳು ಹಾನಿಗೊಳಗಾಗಿವೆ ಮತ್ತು ಐವರು ಮೃತಪಟ್ಟಿದ್ದಾರೆ. ಪ್ರಸ್ತುತ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳು ಸಕ್ರಿಯರಾಗಿದ್ದು ಅಗತ್ಯ ನೆರವು ನೀಡುತ್ತಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಸಂತ್ರಸ್ತರ ನೆರವಿಗೆ ಸರ್ಕಾರ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ. ಜಲ್ಪೈಗುರಿ-ಮೈನಾಗುರಿ ಪ್ರದೇಶಗಳಲ್ಲಿ ಮಧ್ಯಾಹ್ನ ಹಠಾತ್ ಭಾರಿ ಮಳೆ ಮತ್ತು ಬಿರುಗಾಳಿ ಗಾಳಿಯಿಂದ ಜೀವಹಾನಿ, ಮನೆ ಹಾನಿ, ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಅನಾಹುತ ಸಂಭವಿಸಿದೆ ಎಂದು ತಿಳಿದು ಬೇಸರವಾಯಿತು. ಜಿಲ್ಲಾ ಮತ್ತು ಬ್ಲಾಕ್ ಆಡಳಿತ, ಪೊಲೀಸ್, ಡಿಎಂಜಿ ಮತ್ತು ಕ್ಯೂಆರ್‌ಟಿ ತಂಡಗಳು ವಿಪತ್ತು ನಿರ್ವಹಣಾ ಕಾರ್ಯಾಚರಣೆಗಳಲ್ಲಿ ತೊಡಗಿವೆ ಮತ್ತು ಪರಿಹಾರವನ್ನು ಒದಗಿಸುತ್ತವೆ ಎಂದು ಭಾನುವಾರ ಮಮತಾ ಬ್ಯಾನರ್ಜಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದರು.
ಭಾನುವಾರ ಏನೇನಾಯ್ತು. ? ಜಲ್ಪೈಗುರಿಯ ಹಲವು ಎಕರೆಗಳಲ್ಲಿ ಕೃಷಿ ಭೂಮಿ ಮತ್ತು ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ. ರಾಜರಹತ್, ಬರ್ನಿಶ್, ಬಕಾಲಿ, ಜೋರ್ಪಕ್ಡಿ, ಮಧಬ್ದಂಗ ಮತ್ತು ಸಪ್ತಿಬಾರಿ ಪ್ರದೇಶಗಳು ಹೆಚ್ಚು ಬಾಧಿತವಾಗಿವೆ. ರಾಜ್ಯಪಾಲ ಸಿವಿ ಆನಂದ ಬೋಸ್ ಜಲ್ಪೈಗುರಿಯಲ್ಲಿ ಹಾನಿಗೊಳಗಾದ ಜಿಲ್ಲೆಗಳಿಗೆ ಇಂದು ಭೇಟಿ ನೀಡಲಿದ್ದಾರೆ ಎಂದು ರಾಜಭವನದ ಅಧಿಕಾರಿಗಳು ತಿಳಿಸಿದ್ದಾರೆ.
ನೆರವಿಗೆ ಪ್ರಧಾನಿ ಮೋದಿ ಸೂಚನೆ. ಪಶ್ಚಿಮ ಬಂಗಾಳದ ಜಲ್ಪೈಗುರಿ-ಮೈನಗುರಿ ಪ್ರದೇಶಗಳಲ್ಲಿ ಬಿರುಗಾಳಿಯಿಂದ ಹಾನಿಗೊಳಗಾಗಿರುವುದನ್ನು ಕೇಳಿ ಬೇಸರವಾಯಿತು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು. ಅಧಿಕಾರಿಗಳೊಂದಿಗೆ ಮಾತನಾಡಿ, ಅತಿವೃಷ್ಟಿಯಿಂದ ಹಾನಿಗೊಳಗಾದವರಿಗೆ ಸೂಕ್ತ ನೆರವು ನೀಡುವಂತೆ ತಿಳಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಉಲ್ಲೇಖಿಸಿದ್ದಾರೆ.
ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜಲ್ಪೈಗುರಿ ಮತ್ತು ಮೈನಾಗುರಿಯಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಅಸಹಾಯಕರ ನೆರವಿಗೆ ಧಾವಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.