Breaking
Tue. Dec 24th, 2024

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣ..!

ಚಿತ್ರದುರ್ಗ, ಏಪ್ರಿಲ್. 01 : ರೈತರಿಗೆ ಬೆಳೆವಿಮೆ ಬೆಳೆ ಪರಿಹಾರ ನೀಡದೆ ಸಂಕಷ್ಟಕ್ಕೆ ನೂಕಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣದವರು ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಆಳುವ ಸರ್ಕಾರಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದರು. 

ಲೋಕಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಲು ಅವಕಾಶ ನೀಡದ ಕಾರಣ ರೋಟರಿ ಬಾಲಭವನದ ಸಮೀಪ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದ ರೈತರು ಕೂಡಲೆ ಬೆಳೆವಿಮೆ ಪರಿಹಾರ ನೀಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಮಾತನಾಡಿ ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆ ಮಳೆಯಾಶ್ರಿತ ಪ್ರದೇಶ. ಇಲ್ಲಿನ ರೈತರು ಮಳೆಯನ್ನೇ ನಂಬಿಕೊಂಡು ಒಕ್ಕಲುತನ ಮಾಡಬೇಕಿದೆ. ಹಿಂಗಾರು-ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆ ನಷ್ಟವಾಗಿ ರೈತರ ಬದುಕು ಮೂರಾ ಬಟ್ಟೆಯಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆವಿಮೆ, ಬೆಳೆ ಪರಿಹಾರ ನೀಡದೆ ಸತಾಯಿಸುವುದರ ಬದಲಿಗೆ ಕೂಡಲೆ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲಿ ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ ಹತ್ತು ದಿನದೊಳಗೆ ಬೆಳೆವಿಮೆ ಬೆಳೆ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದಂತೆ ಕೂಡಲೆ ಪರಿಹಾರ ಕೊಡಬೇಕೆಂದು ಪಟ್ಟು ಹಿಡಿದರು.

ಬೇಸಿಗೆ ಆರಂಭವಾಗಿರುವುದರಿಂದ ಜಾನುವಾರುಗಳಿಗೆ ಮೇವು ತರಲು ರೈತರಲ್ಲಿ ಶಕ್ತಿಯಿಲ್ಲದಂತಾಗಿದೆ. ಯುಗಾದಿ ಹಬ್ಬ ಹತ್ತಿರದಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೀವಂತವಾಗಿದ್ದರೆ ತಕ್ಷಣವೆ ರೈತರಿಗೆ ಬೆಳೆವಿಮೆ, ಬೆಳೆ ಪರಿಹಾರ ತಲುಪಿಸಬೇಕೆಂದರು. 

ರೈತ ಮುಖಂಡರುಗಳಾದ ಧನಂಜಯ, ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ತಿಪ್ಪೇಸ್ವಾಮಿ, ಲಕ್ಷ್ಮಕ್ಕ, ನಿತ್ಯಶ್ರಿ, ಲಕ್ಷ್ಮಮ್ಮ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related Post

Leave a Reply

Your email address will not be published. Required fields are marked *