Breaking
Mon. Dec 23rd, 2024

ದೇವಸ್ಥಾನದಲ್ಲಿ ಚಾಂಗದೇವ ಪ್ರತಿಷ್ಠಾಪಿಸಿದ ಉಗ್ರ ನರಸಿಂಹ ದೇವ ಸಾಲಿಗ್ರಾಮಕ್ಕೆ ವಿಶೇಷ ಪೂಜೆ..!

12 ನೇ ಶತಮಾನದಲ್ಲಿ ಜೀವಿಸಿದ್ದ ಚಾಂಗದೇವ ಮುಸ್ಲಿಂ ಆಗಿದ್ದರೂ ಆತನಿಗೆ ಇಲ್ಲಿ ದೇವಸ್ಥಾನ ನಿರ್ಮಿಸಿದ್ದು ಭಾವೈಕ್ಯತೆಯ ಸಂಕೇತವೇ. ಒಂದು ಕಡೆ ಆತನಿಗೆ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದರೆ, ಜಾತ್ರೆಯ ಎರಡನೇ ದಿನ ಅದೇ ಚಾಂಗದೇವನ ಹೆಸರಿನಲ್ಲಿ ಇದೇ ದೇವಸ್ಥಾನದ ಮುಂದೆ ಉರುಸು ಕೂಡ ನೆರವೇರುತ್ತೆ. ಇನ್ನು ಈ ಚಾಂಗದೇವನಿಗೆ ಇಷ್ಟಾರ್ಥಸಿದ್ಧಿ ದೇವ ಅಂತಾನೂ ಕರೆಯಲಾಗುತ್ತೆ. 

 ಅದೊಂದು ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರೋ ಪುಣ್ಯ ಸ್ಥಳ. ಭಾವೈಕ್ಯತೆಯನ್ನು ನಾಡಿಗೆ ಸಾರಿ ಹೇಳಿದ ಪುಣ್ಯ ಭೂಮಿಯದು. ಅಂಥ ಸ್ಥಳದಲ್ಲಿಂದು ಜಾತ್ರೆಯ ಸಂಭ್ರಮ. ಹಿಂದೂ-ಮುಸ್ಲಿಂ ಸಮುದಾಯದವರೆಲ್ಲಾ ಸೇರಿ ಬಲು ಸಂಭ್ರಮದಿಂದ ನಡೆಸೋ ಈ ಜಾತ್ರೆಯಲ್ಲಿ ಹಲವಾರು ಪವಾಡಗಳೂ ನಡೆಯುತ್ತವೆ ಅನ್ನೋ ನಂಬಿಕೆಯೂ ಜನರಲ್ಲಿದೆ. ಹಾಗಾದ್ರೆ ಯಾವುದಾ ಜಾತ್ರೆ? ಅಲ್ಲಿನ ವಿಶೇಷತೆಗಳೇನು? ಬನ್ನಿ ನೋಡೋಣ. ಕಣ್ಣು ಹೊರಳಿಸಿದಷ್ಟೂ ಕಾಣೋ ಜನ ಸಾಗರ; ದೇವರ ದರ್ಶನಕ್ಕಾಗಿ ನಿಂತು ಕೊಂಡ ಸಾವಿರಾರು ಜನ ಭಕ್ತರು; ಹಳ್ಳದಲ್ಲಿ ನಿಂತುಕೊಂಡ ನೀರಿನಲ್ಲಿಯೇ ಸ್ನಾನ ಮಾಡುತ್ತಿರೋ ಭಕ್ತರು- ಇದೆಲ್ಲಾ ಕಂಡು ಬಂದಿದ್ದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರು ಗ್ರಾಮದ ಜಾತ್ರೆಯಲ್ಲಿ ಗ್ರಾಮದ ಚಾಂಗದೇವರ ಜಾತ್ರೆಯೇ ಒಂದು ವಿಶೇಷ. ನೂರಾರು ವರ್ಷಗಳ ಹಿಂದೆ ಚಾಂಗದೇವ ಈ ಗ್ರಾಮದಲ್ಲಿ ನೆಲೆಸಿದ್ದ ಅನ್ನೋ ಪ್ರತೀತಿ ಇದೆ.

ಅವತಾರ ಪುರುಷನಾಗಿದ್ದ ಆತ ಸಂತ ಪರಂಪರೆಯ ಮಹಾಜ್ಞಾನಿಯಾಗಿ ಸಂಚರಿಸುತ್ತಾ, ಹಿಂದೂ-ಮುಸ್ಲಿಮರಲ್ಲಿ ಭಾವೈಕ್ಯತೆಯನ್ನು ಮೂಡಿಸಿದ. ಇಂಥ ಮಹಿಮಾ ಪುರುಷನ ಸ್ಮರಣೆಗಾಗಿ ಇಂದಿಗೂ ಜಾತ್ರೆಯನ್ನು ಮಾಡಲಾಗುತ್ತಿದೆ. ಒಂದು ಕಡೆ ದೇವಸ್ಥಾನವಿದ್ದರೆ, ಮತ್ತೊಂದು ಭಾಗದಲ್ಲಿ ಮಸೀದಿ ಇರೋದೇ ಇಲ್ಲಿಯ ವಿಶೇಷತೆ. ದೇವಸ್ಥಾನದಲ್ಲಿ ಚಾಂಗದೇವ ಪ್ರತಿಷ್ಠಾಪಿಸಿದ ಉಗ್ರ ನರಸಿಂಹ ದೇವ ಸಾಲಿಗ್ರಾಮಕ್ಕೆ ವಿಶೇಷ ಪೂಜೆ ಮಾಡಲಾಗುತ್ತೆ. ಜಾತ್ರೆಗೆ ಲಕ್ಷಾಂತರ ಜನರು ಆಗಮಿಸಿ, ಚಾಂಗದೇವನ ದರ್ಶನ ಪಡೆಯುತ್ತಾರೆ. 

ಜಾತ್ರೆಯ ಮೊದಲ ದಿನ ಚಾಂಗದೇವನಿಗೆ ಗಂಧಾಭಿಷೇಕ ಮಾಡಲಾಗುತ್ತದೆ. ಬಳಿಕ ಬೆಣ್ಣೆ ಹಳ್ಳದ ನೀರಿನಿಂದಲೇ ಸಂತರು ದೀಪ ಬೆಳಗಿಸಿ ಪವಾಡ ಮೆರೆಯುತ್ತಾರೆ ಅನ್ನೋ ನಂಬಿಕೆ. ಇದನ್ನು ನೋಡಲು ಹೊರ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ. ಬೆಣ್ಣೆ ಹಳ್ಳದಿಂದ ಮೆರವಣಿಗೆ ಮೂಲಕ ನೀರನ್ನು ತರೋ ಸಂತರು, ಅದೇ ನೀರಿನಿಂದ ದೇವಸ್ಥಾನದಲ್ಲಿರೋ ದೀಪವನ್ನು ಬೆಳಗಿಸುತ್ತಾರೆ ಅನ್ನೋ ನಂಬಿಕೆ ಇದೆ.  ಇನ್ನು ಈ ಬೆಣ್ಣೆ ಹಳ್ಳದ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗ ನಿವಾರಣೆ ಆಗುತ್ತೆ ಅನ್ನೋ ನಂಬಿಕೆಯ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇದೇ ನೀರಿನಲ್ಲಿ ಸ್ನಾನ ಮಾಡುತ್ತಾರೆ.

ಈ ಬಾರಿ ಮಳೆಯ ಕೊರತೆಯಿಂದಾಗಿ ಹಳ್ಳದಲ್ಲಿ ನೀರಿರದಿದ್ದರೂ ನಿಂತ ಕೊಂಚ ನೀರಿನಲ್ಲಿಯೇ ಭಕ್ತರು ಸ್ನಾನ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೂ ಭಕ್ತರು ಭಾವಪರವಶರಾಗಿ ಸ್ನಾನ ಮಾಡಿದ್ದು, ವಿಶೇಷವಾಗಿತ್ತು. ಇನ್ನು ಭಕ್ತರು ಸ್ನಾನ ಮಾಡಿದ ಬಳಿಕ ಹಳೆಯ ಬಟ್ಟೆಯನ್ನು ಅದೇ ಹಳ್ಳದಲ್ಲಿಯೇ ಬಿಟ್ಟು ಹೋಗಬೇಕು ಅನ್ನೋದು ನಿಯಮ.

12 ನೇ ಶತಮಾನದಲ್ಲಿ ಜೀವಿಸಿದ್ದ ಚಾಂಗದೇವ ಮುಸ್ಲಿಂ ಆಗಿದ್ದರೂ ಆತನಿಗೆ ಇಲ್ಲಿ ದೇವಸ್ಥಾನ ನಿರ್ಮಿಸಿದ್ದು ಭಾವೈಕ್ಯತೆಯ ಸಂಕೇತವೇ. ಒಂದು ಕಡೆ ಆತನಿಗೆ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದರೆ, ಜಾತ್ರೆಯ ಎರಡನೇ ದಿನ ಅದೇ ಚಾಂಗದೇವನ ಹೆಸರಿನಲ್ಲಿ ಇದೇ ದೇವಸ್ಥಾನದ ಮುಂದೆ ಉರುಸು ಕೂಡ ನೆರವೇರುತ್ತೆ. ಇನ್ನು ಈ ಚಾಂಗದೇವನಿಗೆ ಇಷ್ಟಾರ್ಥಸಿದ್ಧಿ ದೇವ ಅಂತಾನೂ ಕರೆಯಲಾಗುತ್ತೆ.

ಈ ದೇವನಿಗೆ ಬೆಳ್ಳಿಯ ಕುದುರೆ, ಪಾದುಕೆ ಒಪ್ಪಿಸಿ ಹರಕೆ ಹೊತ್ತರೆ, ಅವರ ಇಷ್ಟಾರ್ಥ ಸಿದ್ಧಿ ಆಗುತ್ತೆ ಅನ್ನೋ ನಂಬಿಕೆಯೇ ಇದಕ್ಕೆ ಕಾರಣ. ಒಂದು ಕಡೆ ಈ ದೇವನಿಗೆ ಹಿಂದೂಗಳು ಮಂಗಳಾರತಿ ಮಾಡುತ್ತಿದ್ದರೆ, ಮುಸ್ಲಿಮರು ನಮಾಜು ಮಾಡೋ ಮೂಲಕ ಆತನನ್ನು ಧ್ಯಾನಿಸುತ್ತಾರೆ. ಒಂದೇ ವ್ಯಕ್ತಿ ಎರಡೂ ಸಮುದಾಯಗಳ ನಡುವೆ ಭಾವೈಕ್ಯತೆಯನ್ನು ಮೂಡಿಸುವಲ್ಲಿ ಹಾಗೂ ಭಕ್ತರ ನಡುವೆ ಸಾಮರಸ್ಯವನ್ನು ಸಾರುವಲ್ಲಿ ಯಶಸ್ವಿಯಾಗಿದ್ದು ನಿಜಕ್ಕೂ ಅಚ್ಚರಿಯ ಸಂಗತಿಯೇ. ಭಕ್ತರು ಹೇಳುವಂತೆ ಇಲ್ಲಿ ನಡೆಯುವ ಪವಾಡಗಳನ್ನು ಬದಿಗಿಟ್ಟು ನೋಡೋದಾದರೆ, ಗ್ರಾಮದ ಎಲ್ಲರೂ ಈ ಜಾತ್ರೆಯಲ್ಲಿ ಪಾಲ್ಗೊಂಡು, ಹಿಂದು-ಮುಸ್ಲಿಂ ಸಮುದಾಯದ ಪ್ರಕಾರ ಜಾತ್ರೆ ನಡೆಸೋದು ನಿಜಕ್ಕೂ ಸಂತಸದ ಸಂಗತಿಯೇ ಸರಿ.

 

Related Post

Leave a Reply

Your email address will not be published. Required fields are marked *