ಬೆಂಗಳೂರಿಗೆ ಬಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಜತೆ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿದರು. ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಇತರ ನಾಯಕರ ಜತೆ ಸಮಾಲೋಚನೆ ನಡೆಸಿದ ಶಾ, ಹಲವು ಸೂಚನೆಗಳನ್ನು ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದಕ್ಕಾಗಿ ಹಲವು ತಂತ್ರಗಳನ್ನು ರೂಪಿಸಿರುವ ಶಾ, ಹಿಂದುಳಿದ ಸಮುದಾಯಗಳ ಸೆಳೆಯಲು ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದ್ದಾರೆ.
ಬಿಜೆಪಿ, ಜೆಡಿಎಸ್ ನಾಯಕರಿಗೆ ಅಮಿತ್ ಶಾ ಸಲಹೆಗಳೇನು ?
- ಹಿಂದುಳಿದ ಸಮುದಾಯಗಳ ಸೆಳೆಯಲು ಕಾರ್ಯ ಪ್ರವೃತ್ತರಾಗಿ.
- ಹಿಂದುಳಿದ ಸಮುದಾಯಗಳು ಇರುವಂಥ ಕ್ಷೇತ್ರಗಳ ಮೇಲೆ ಹೆಚ್ಚು ನಿಗಾ ವಹಿಸಿ ಕೆಲಸ ಮಾಡಿ.
- ತಳ ಸಮುದಾಯಗಳ ಕ್ಷೇತ್ರಗಳಲ್ಲಿ ಮತ್ತಷ್ಟು ಸಂಘಟನೆ ಚುರುಕುಗೊಳಿಸಿ.
- ಮೀಸಲಾತಿ ಇರುವ ಕ್ಷೇತ್ರಗಳಲ್ಲಿ ಹೆಚ್ಚು ಸಮಾವೇಶಗಳನ್ನು, ರೋಡ್ ಶೋಗಳನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಿ.
- ಪ್ರಬಲ ಸಮುದಾಯಗಳ ಜೊತೆಗೆ ಎಲ್ಲಾ ಹಿಂದುಳಿದ ಸಮುದಾಯಗಳ ಮತಗಳನ್ನು ಕ್ರೂಡೀಕರಿಸಬೇಕು. ಈ ನಿಟ್ಟಿನಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ಹೃತ್ಪೂರ್ವಕವಾಗಿ ಕೆಲಸ ಮಾಡಬೇಕು.
- ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕು.
- ತಳಮಟ್ಟದ ಕಾರ್ಯಕರ್ತರಿಂದ ಮುಖಂಡರವರೆಗೂ ಯಾವುದೇ ಭಿನ್ನಾಭಿಪ್ರಾಯ, ಅಸಮಧಾನ ಇರಬಾರದು.
- ಒಂದು ವೇಳೆ ಅಸಮಾಧಾನ ಇದ್ದರೂ ಬಗೆಹರಿಸಿಕೊಳ್ಳುವಂಥ ಕೆಲಸವನ್ನು ಎರಡು ಪಕ್ಷದ ಹಿರಿಯರು ಮಾಡಬೇಕು.
- ಬೆಂಗಳೂರಿನ ಹೋಟೆಲ್ನಲ್ಲಿ ನಡೆದ ಸಭೆಯ ಬಳಿಕ ಅಮಿತ್ ಶಾ, ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಐದು ಲೋಕಸಭಾ ಕ್ಷೇತ್ರಗಳ ಶಕ್ತಿ ಕೇಂದ್ರ ಪ್ರಮುಖರ ಸಭೆಗೆ ಹಾಜರಾದರು.
ಇದೇ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ವೇದಿಕೆಯಲ್ಲಿ ಶಾ ಕಾಲು ಮುಟ್ಟಿ ನಮಸ್ಕರಿಸಿದರು. ವೇದಿಕೆಗೆ ಬಂದ ಕೂಡಲೇ ಸಮಯ ವಿಳಂಬ ಮಾಡದೇ ವೇದಿಕೆ ಮೇಲಿದ್ದ ಮುಖಂಡರನ್ನು ಕರೆದು ಜ್ಯೋತಿ ಬೆಳಗಿಸಿದ ಅಮಿತ್ ಶಾ, ಸಮಾವೇಶಕ್ಕೆ ಚಾಲನೆ ನೀಡಿದರು.