ಘಾನಾ ರಾಷ್ಟ್ರದಲ್ಲಿರುವ ಅಕ್ರಾದ ನುಂಗುವಾ ಪ್ರದೇಶದಲ್ಲಿ 63 ವರ್ಷದ ಪಾದ್ರಿಯೊಬ್ಬರು 12 ವರ್ಷದ ಬಾಲಕಿಯನ್ನು ವಿವಾಹವಾಗಿದ್ದಾರೆ. ಈ ಮದುವೆ ಲೈಂಗಿಕ ಸಂಬಂಧದ ಕಾರಣಕ್ಕಲ್ಲ. ಆಧ್ಯತ್ಮಿಕ ಕರ್ತವ್ಯಗಳಲ್ಲಿ ಸಹಾಯ ಮಾಡುವುದಕ್ಕಾಗಿ ಎಂದು ಆ ವಿವಾಹವನ್ನು ಪಾದ್ರಿ ಮತ್ತು ಅವರ ವಕ್ತಾರರು ಸಮರ್ಥಿಸಿಕೊಂಡಿದ್ದಾರೆ.
ನುಂಗುವಾ ಪ್ರದೇಶದ ಆಧ್ಯಾತ್ಮಿಕ ನಾಯಕ ನುಮೊ ಬೊರ್ಕೆಟಿ ಲಾವೆಹ್ ತ್ಸುರು-33 ಎಂಬವರು ಶನಿವಾರ ನಡೆದ ಬೃಹತ್ ಸಮಾರಂಭದಲ್ಲಿ ಅಪರಿಚಿತ ಬಾಲಕಿಯನ್ನು ವಿವಾಹವಾದರು. ತ್ಸುರು ಅವರು ‘ಗ್ಬೊರ್ಬು ವುಲೋಮೊ’ ಅಥವಾ ಸಾಂಪ್ರದಾಯಿಕ ಪ್ರಧಾನ ಅರ್ಚಕರಾಗಿದ್ದಾರೆ.
ಬಾಲಕಿಯನ್ನು ವಿವಾಹವಾದ ತ್ಸುರು ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆಕ್ರೋಶ ಭುಗಿಲೆದ್ದ ನಂತರ, ಬಾಲಕಿ ಮತ್ತು ಆಕೆಯ ತಾಯಿಯನ್ನು ಪೊಲೀಸ್ ರಕ್ಷಣೆಯಲ್ಲಿ ಇರಿಸಲಾಗಿದೆ. ಘಾನಾದ ಅಟಾರ್ನಿ ಜನರಲ್ ತನಿಖೆ ಪ್ರಾರಂಭಿಸಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದೆ.
ಇದು ಕ್ರಿಮಿನಲ್ ಅಪರಾಧವಾಗಿದೆ. ಆರೋಪಗಳು ಸಾಬೀತಾದರೆ, ಇದರಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುತ್ತದೆ” ಎಂದು ಅಟಾರ್ನಿ ಜನರಲ್ ಕಚೇರಿ ಹೇಳಿದೆ.
ಘಾನಾದ ಕಾನೂನಿನ ಪ್ರಕಾರ, ಮದುವೆಗೆ ಕಾನೂನುಬದ್ಧ ಕನಿಷ್ಠ ವಯಸ್ಸು 18 ವರ್ಷ ಆಗಿದೆ. ಆದರೆ, ಪಾದ್ರಿ 12 ವರ್ಷದ ಬಾಲಕಿಯನ್ನು ವಿವಾಹವಾಗಿದ್ದಾರೆ.
ವಿವಾಹವನ್ನು ಸಮರ್ಥಿಸಿಕೊಂಡಿರುವ ಪಾದ್ರಿಯ ವಕ್ತಾರ ಮಂಕ್ರಾಲೊ ಶ್ವೊನೊಟಾಲೋರ್, “ಬಾಲಕಿ 18 ವರ್ಷ ವಯಸ್ಸನ್ನು ತಲುಪುವವರೆಗೆ ವೈವಾಹಿಕ ಕರ್ತವ್ಯಗಳನ್ನು ಪೂರೈಸುವುದಿಲ್ಲ. ಇದು ಮದುವೆ ಸಮಾರಂಭವಲ್ಲ. ಈ ವಿವಾಹಕ್ಕೆ ಲೈಂಗಿಕ ಸಂಬಂಧವಿಲ್ಲ. ಪಾದ್ರಿ ಈಗಾಗಲೇ ಮೂವರು ಹೆಂಡತಿಯರನ್ನು ಹೊಂದಿದ್ದಾರೆ. ಇದು ಪಾದ್ರಿಯ ಆಧ್ಯಾತ್ಮಿಕ ಕರ್ತವ್ಯಗಳಿಗೆ ಸಹಾಯ ಮಾಡುವುದಕ್ಕಾಗಿ ನಡೆದಿರುವ ವಿವಾಹ” ಎಂದು ಸಾಂಪ್ರದಾಯಿಕ ಪಾತ್ರವಾಗಿದೆ” ಎಂದು ಹೇಳಿರುವುದಾಗಿ ವರದಿಯಾಗಿದೆ.