ರಾಯ್ಪುರ : ಛತ್ತೀಸ್‌ಗಢದ ಗುಧಿಯಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತ್ ಮಾತಾ ಚೌಕ್ ಬಳಿಯಿರುವ ವಿದ್ಯುತ್ ಪ್ರಸರಣ ಘಟಕದಲ್ಲಿ ಅಗ್ನಿ ಅವಘಡವೊಂದು ಸಂಭವಿಸಿದೆ. ನೋಡು ನೋಡುತ್ತಲೇ ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ವ್ಯಾಪಿಸಿದೆ.
ಮಾಹಿತಿ ಪ್ರಕಾರ, ಗೋದಾಮಿನಲ್ಲಿಟ್ಟಿದ್ದ 1,500 ಟ್ರಾನ್ಸ್ ಫಾರ್ಮರ್ ಗಳು ಸುಟ್ಟು ಭಸ್ಮವಾಗಿವೆ. ಗೋದಾಮಿನಲ್ಲಿ ಸುಮಾರು 6,000 ಪರಿವರ್ತಕಗಳನ್ನು ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ವಿದ್ಯುತ್ ಇಲಾಖೆ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡು ಸುತ್ತಮುತ್ತಲಿನ ಪ್ರದೇಶದಲ್ಲಿ ಅಸ್ತವ್ಯಸ್ತವಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುವ ಜನರು ಮನೆ ಖಾಲಿ ಮಾಡುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಅದರ ಕೆನ್ನಾಲಿಗೆ ಎಲ್ಲಾ ಕಡೆ ವ್ಯಾಪಿಸಿದೆ. ಬೆಂಕಿ ಹೆಚ್ಚುತ್ತಿರುವುದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ನಾಲ್ಕು ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸುತ್ತಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
ಈ ಸಂಬಂಧ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ವಿದ್ಯುತ್ ಇಲಾಖೆಯ ಉಪವಿಭಾಗ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ವಿದ್ಯುತ್ ಪೂರೈಕೆ ಸಂಪೂರ್ಣ ವ್ಯತ್ಯಯವಾಗಿದೆ. ಇಲಾಖಾ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.