ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಎನ್. ಚಂದ್ರಪ್ಪ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಗೋವಿಂದ ಕಾರಜೋಳ ಅವರು ಇಂದು ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಪಕ್ಷಗಳು ಭಾರಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ.
ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರು ಬೆಳಿಗ್ಗೆ 10 ಗಂಟೆಗೆ ನಗರದಲ್ಲಿರುವ ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. 10.30ಕ್ಕೆ ನೀಲಕಂಠೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಯಕರ್ತರ ಬೃಹತ್ ಪಾದಯಾತ್ರೆ ನಡೆಯಲಿದೆ. ನಂತರದಲ್ಲಿ ಅವರು ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಮಾಜಿ ಸಚಿವ ಹೆಚ್.ಅಂಜನೇಯ, ಶಾಸಕರಾದ ಟಿ.ಬಿ.ಜಯಚಂದ್ರ, ಎನ್.ವೈ.ಗೋಪಾಲಕೃಷ್ಣ, ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಸೇರಿದಂತೆ ಕಾಂಗ್ರೆಸ್ಸಿನ ಹಲವು ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಇನ್ನು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಮಧ್ಯಾನ್ಹ 12 ಗಂಟೆಗೆ ನೀಲಕಂಠೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಜಿಲ್ಲಾಧಿಕಾರಿ ಕಚೇರಿವರೆಗೆ ಬಿಜೆಪಿ ಕಾರ್ಯಕರ್ತರ ಮೆರವಣಿಗೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ, ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವರಾದ ಶ್ರೀರಾಮುಲು, ಮಾಧುಸ್ವಾಮಿ, ಗಾಲಿ ಜನಾರ್ಧನ ರೆಡ್ಡಿ, ಶಾಸಕರಾದ ಎಂ. ಚಂದ್ರಪ್ಪ, ಮಾಜಿ ಶಾಸಕ ಜಿ..ಹೆಚ್.ತಿಪ್ಪಾರೆಡ್ಡಿ, ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಎ. ಮುರಳಿ, ಕ್ಷೇತ್ರದ ಚುನಾವಣಾ ಉಸ್ತುವಾರಿ ಎಸ್. ಲಿಂಗಮೂರ್ತಿ, ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಕೆ.ಎಸ್.ನವೀನ್, ಜೆಡಿಎಸ್ ರಾಜ್ಯ ಪ್ರಕಾರ್ಯದರ್ಶಿ ಬಿ.ಕಾಂತರಾಜ್, ಜಿಲ್ಲಾಧ್ಯಕ್ಷ ಎಂ.ಜಯಣ್ಣ, ಮಾಜಿ ಅಧ್ಯಕ್ಷ ಯಶೋಧರ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್, ಪ್ರಮುಖರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಇದುವರೆಗೆ ಒಟ್ಟು 11 ಅಭ್ಯರ್ಥಿಗಳಿಂದ 14 ನಾಮಪತ್ರ ಸಲ್ಲಿಕೆಯಾಗಿರುತ್ತದೆ.