Breaking
Tue. Dec 24th, 2024

ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದೆಂದು ಕರ್ನಾಟಕ ಸರ್ವೋದಯ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಎಚ್ಚರಿಕೆ..!

ಚಿತ್ರದುರ್ಗ, ಏಪ್ರಿಲ್.05 : ಬರ ನಿರ್ವಹಣೆಯಲ್ಲಿ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದೆಂದು ಕರ್ನಾಟಕ ಸರ್ವೋದಯ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಎಚ್ಚರಿಸಿದರು. 

ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ಸರ್ವೋದಯ ಪಕ್ಷದಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆಯಿಂದ ಸ್ಪರ್ಧಿಸಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಎಂಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲಾಗಿತ್ತು. ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದ್ದೇವೆ. 

ಎನ್.ಡಿ.ಎ. ಮತ್ತು ಮಿತ್ರ ಪಕ್ಷಗಳ ವಿರುದ್ದವಾಗಿ ಮತ ಚಲಾಯಿಸುವಂತೆ ಎಲ್ಲಾ ಕಡೆ ಸುತ್ತಾಡಿ ಜನರನ್ನು ಜಾಗೃತಿಗೊಳಿಸಲಾಗುವುದು.

2014 ರ ಪಾರ್ಲಿಮೆಂಟ್ ಚುನಾವಣಾ ಪೂರ್ವದಲ್ಲಿ ನರೇಂದ್ರಮೋದಿ ರೈತರ ಸಾಲ ಮನ್ನ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದರು. ಎರಡನೆ ಬಾರಿಗೂ ಪ್ರಧಾನಿಯಾಗಿ ಹತ್ತು ವರ್ಷಗಳಲ್ಲಿ ಕಾರ್ಪೊರೇಟ್ ಕಂಪನಿಗಳ ಹದಿನಾಲ್ಕು ಲಕ್ಷ ರೂ.ಗಳ ಸಾಲ ಮನ್ನ ಮಾಡಿದರೆ ವಿನಃ ರೈತರ ಕಡೆ ತಿರುಗಿಯೂ ನೋಡಲಿಲ್ಲ. ನೈಸರ್ಗಿಕ ವಿಕೋಪದಿಂದ ಆಗಿರುವ ನಷ್ಟವನ್ನು ಭರಿಸಲು ಆಗದೆ ಸಂಕಷ್ಟದಲ್ಲಿರುವ ರೈತನ ಪಾಡು ಹೇಳತೀರದಂತಾಗಿದೆ ಎಂದರು. 

ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇವೆಂದು ಹೇಳಿ ಇದುವರೆಗೂ ಜಾರಿಗೊಳಿಸಿಲ್ಲ. ರೈತರಿಗೆ ಅತಿವೃಷ್ಟಿ ಪರಿಹಾರ ಕೊಟ್ಟಿಲ್ಲ. ಐದು ನೂರು ಒಂದು ಸಾವಿರ ರೂ. ಮುಖ ಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿ ಸಿರಿವಂತರು ತಮ್ಮ ಬಳಿಯಿರುವ ಕಪ್ಪು ಹಣವನ್ನು ಬಿಳಿ ಮಾಡಿಸಿಕೊಳ್ಳಲು ಅನುಕೂಲ ಮಾಡಿದರಷ್ಟೆ. ರೈತರ ಆದಾಯ ದ್ವಿಗುಣವಾಗಲಿಲ್ಲ. ರೈತರು ಸಾವಿರಾರು ಕೋಟಿ ರೂ.ಗಳ ಬೆಳೆವಿಮೆ ಕಟ್ಟಿದ್ದಾರೆ. ಅಪ್ಪಿತಪ್ಪಿಯೂ ಬೆಳೆ ನಷ್ಟದ ಪರಿಹಾರ ರೈತರ ಕೈಸೇರಿಲ್ಲ.

ಭದ್ರಾಮೇಲ್ದಂಡೆ ಯೋಜನೆಗೆ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಘೋಷಿಸಿರುವ ಕೇಂದ್ರ ಸರ್ಕಾರ ನಯಾ ಪೈಸೆಯನ್ನು ಬಿಡುಗಡೆಗೊಳಿಸಿಲ್ಲ. ರಾಮ ಮಂದಿರದ ಹೆಸರಿನಲ್ಲಿ ಫಂಡ್ ಎತ್ತಿದೆ. ಕೃಷಿ, ಕೃಷಿ ಮಾರುಕಟ್ಟೆಯನ್ನು ಕಾರ್ಪೊರೇಟ್‍ಗಳಿಗೆ ನೀಡುವುದರಲ್ಲಿ ಅನುಮಾನವಿಲ್ಲ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ. ಅಧಿಕಾರಕ್ಕೆ ಬಂದರೆ ಸಂವಿಧಾನ ಉಳಿಯುವುದಿಲ್ಲ. ಅದಕ್ಕಾಗಿ ಎಚ್ಚರಿಕೆಯಿಂದ ಮತ ಚಲಾಯಿಸಿ ಎಂದು ರಾಜ್ಯದ ಮತದಾರರನ್ನು ಎಚ್ಚರಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ಸರ್ವೋದಯ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *