ಬೆಳಗಾವಿ : ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಲೋಕಸಭಾ ಚುನಾವಣಾ ಪ್ರಚಾರಾರ್ಥ ಶುಕ್ರವಾರ ಮಿಂಚಿನ ಸಂಚಾರ ನಡೆಸಿದರು. ಅರಭಾವಿ ಕ್ಷೇತ್ರದ ಮೆಳವಂಕಿ, ಕೌಜಲಗಿ, ಯಾದವಾಡ, ಹಳ್ಳೂರಿನ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶ ನಡೆಸಿದರು. ಶನಿವಾರವೂ ಕ್ಷೇತ್ರದಲ್ಲಿ ಪ್ರಚಾರ ಮುಂದುವರಿಸಲಿದ್ದಾರೆ.
ಬಿರು ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಮಾವೇಶಗಳ ಯಶಸ್ಸಿಗೆ ಕೈ ಜೋಡಿಸಿದರು. ಮಧ್ಯಾಹ್ನ 1 ಗಂಟೆಗೆ ಮೆಳವಂಕಿಯಲ್ಲಿ ಆರಂಭಗೊಂಡ ಚುನಾವಣಾ ಪ್ರಚಾರ, ರಾತ್ರಿ 8.30ಕ್ಕೆ ಮೂಡಲಗಿ ತಾಲೂಕಿನ ಹಳ್ಳೂರಿನಲ್ಲಿ ಮುಕ್ತಾಯಗೊಂಡಿತು.
*ಮೃಣಾಲ್ ಬೆಂಬಲಿಸಿ, ಸ್ವಾಭಿಮಾನ ಉಳಿಸಿ* ಯಾದವಾಡದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕ್ಷೇತ್ರದ ಮನೆ ಮಗ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸುವ ಮೂಲಕ ಬೆಳಗಾವಿ ಜಿಲ್ಲೆಯ ಜನ ಸ್ವಾಭಿಮಾನಿಗಳು ಎಂದು ನಿರೂಪಿಸಬೇಕು ಎಂದು ಕರೆ ನೀಡಿದರು. ಕ್ಷೇತ್ರದ ಸಮಸ್ಯೆಗಳನ್ನು ಆಲಿಸಲು ಮೃಣಾಲ್ ನಿಮ್ಮ ಮನೆ ಬಾಗಿಲಿಗೆ ಬರುತ್ತಾನೆ. ಬಿಜೆಪಿ ಅಭ್ಯರ್ಥಿ ಗೆದ್ದರೆ, ಅವರನ್ನು ಹುಬ್ಬಳ್ಳಿಗೆ ಹುಡುಕಿಕೊಂಡು ಹೋಗುವ ಪರಿಸ್ಥಿತಿ ಬರುತ್ತದೆ ಎಂದು ಹೇಳಿದರು.
ಕಳೆದ 20 ವರ್ಷಗಳಿಂದ ಬಿಜೆಪಿ ಸಂಸದರಿದ್ದರೂ ಜನರ ಭಾವನೆಗಳಿಗೆ ಸ್ಪಂದಿಸಿಲ್ಲ. ಕೇವಲ ಚುನಾವಣೆ ಸಮಯದಲ್ಲಿ ಮುಖ ತೋರಿಸುವ ಬಿಜೆಪಿ ಅಭ್ಯರ್ಥಿಗೆ ಬೆಳಗಾವಿಯಲ್ಲಿ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಆರೋಪಿಸಿದರು. ಕರೋನಾ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗಾಗಿ ಕಾಂಗ್ರೆಸ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಿಸಿತ್ತು. ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದೆ ಎಂದು ಹೇಳಿದರು.
*ನನಗೊಂದು ಅವಕಾಶ ಕೋಡಿ* ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿಗೆ ಹೋಗಿರುವ ಜಗದೀಶ್ ಶೆಟ್ಟರ್ ಅವರಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ವಿನಂತಿಸಿದರು. ಕರೋನಾ ಸಮಯದಲ್ಲಿ ಬೆಳಗಾವಿಯಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಗಳನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಿದರು. ಬೆಳಗಾವಿಗೆ ಮೇಲಿಂದ ಮೇಲೆ ಅನ್ಯಾಯ ಎಸಗಿದ್ದಾರೆ ಎಂದು ಟೀಕಿಸಿದರು. ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಮುಖಂಡರಾದ ಅನಿಲ್ ಕುಮಾರ್ ದಳವಾಡಿ, ಮಹಾಂತೇಶ್ ಕಡಾಡಿ ಪ್ರಚಾರದುದ್ದಕ್ಕೂ ಸಾಥ್ ನೀಡಿದರು.
ನಾಳೆಯೂ (ಶನಿವಾರ) ಅರಭಾವಿ ಕ್ಷೇತ್ರದಲ್ಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಚಾರ ಕೈಗೊಳ್ಳಲಿದ್ದಾರೆ. ಶನಿವಾರ ಅರಭಾವಿ ಪಟ್ಟಣ, ವಡ್ಡರಹಟ್ಟಿ, ನಾಗನೂರ, ತುಕ್ಕಾನಟ್ಟಿ, ಕಲ್ಲೋಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಲಿದೆ.