ಚಿತ್ರದುರ್ಗ, ಏಪ್ರಿಲ್.05 : ಜಾತಿ, ಧರ್ಮ, ದೇವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಕೋಮುವಾದಿ ಬಿಜೆಪಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನ ಉಳಿಯುವುದಿಲ್ಲ ಎನ್ನುವುದನ್ನು ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿ ದೇಶ ಉಳಿಸಿ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ ಎಂದು ರೈತ ಮುಖಂಡ ತುಮಕೂರಿನ ಎನ್.ಜಿ.ರಾಮಚಂದ್ರಪ್ಪ ಹೇಳಿದರು.
ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏಪ್ರಿಲ್ ಒಂದರಿಂದ ಆರಂಭಗೊಂಡಿರುವ ದೇಶ ಉಳಿಸಿ ಸಂಕಲ್ಪ ಯಾತ್ರೆ ಮೂರು ತಂಡಗಳಲ್ಲಿ ಸಂಚರಿಸುತ್ತಿದ್ದು, 8 ರಂದು ಬೆಳಗಾವಿ ತಲುಪಿ ಬೃಹತ್ ಸಮಾವೇಶ ನಡೆಸಲಿದೆ. ಈಗಾಗಲೆ ಎರಡು ಬಾರಿ ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿ ಮೂರನೆ ಬಾರಿಗೂ ಅಧಿಕಾರದ ಚುಕ್ಕಾಣಿ ಹಿಡಿಯಲು ಹೊರಟಿರುವುದನ್ನು ತಡೆಯಬೇಕು. ಭ್ರಷ್ಟರನ್ನು ಎದುರುಸಿ ಅಫ್ತಾ ವಸೂಲಿಯಲ್ಲಿ ತೊಡಗಿರುವ ಬಿಜೆಪಿ.ಯನ್ನು ಮನೆಗೆ ಕಳಿಸಬೇಕಾಗಿದೆ. ದೇವರು, ಧರ್ಮದ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಲೂಟಿ ಹೊಡೆಯುವರು ದೇಶಕ್ಕೆ ಬೇಕಿಲ್ಲ.
ರೈತರು ತಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ದೆಹಲಿಯಲ್ಲಿ ಚಳುವಳಿ ನಡೆಸಿದರೆ ಟಿಯರ್ ಗ್ಯಾಸ್, ರಬ್ಬರ್ ಗುಂಡು, ನೆಲಕ್ಕೆ ಮೊಳೆ ಹೊಡೆದು ತಂತಿ ಬೇಲಿ ಹಾಕಿ ದೇಶಕ್ಕೆ ಅನ್ನ ನೀಡುವ ರೈತರನ್ನು ಅವಮಾನಿಸಿರುವುದನ್ನು ಮರೆಯಲಾಗುವುದಿಲ್ಲ. ಕಾರ್ಪೊರೇಟ್ ಕಂಪನಿಗಳ ಪರವಾಗಿರುವವರನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಲಿಸಬೇಕೆಂಬುದು ದೇಶ ಉಳಿಸಿ ಸಂಕಲ್ಪ ಯಾತ್ರೆ ಉದ್ದೇಶ ಎಂದರು.
ಹನ್ನೆರಡರಿಂದ ಹದಿಮೂರು ಸಾವಿರ ಕೋಟಿ ರೂ. ವರ್ಷಕ್ಕೆ ಜಿ.ಎಸ್.ಟಿ. ಸಂಗ್ರಹವಾಗುತ್ತಿದೆ. ಕೇಂದ್ರ ಬಿಜೆಪಿ. ಹಾಗೂ ರಾಜ್ಯದ ಕಾಂಗ್ರೆಸ್ ದುರಾಡಳಿತವನ್ನು ಕೊನೆಗಾಣಿಸಬೇಕಿದೆ. ದುರ್ಬಲ ಪ್ರಧಾನಿಯನ್ನು ಮೂರನೆ ಸಲ ಸಂಸತ್ತಿಗೆ ಪ್ರವೇಶ ಮಾಡಲು ಕೊಡುವುದಿಲ್ಲ. ಇದಕ್ಕೆ ಮತದಾರರು ಮನಸ್ಸು ಮಾಡಬೇಕು ಎಂದು ಎನ್.ಜಿ.ರಾಮಚಂದ್ರಪ್ಪ ಕೋರಿದರು.
ಪ್ರಗತಿಪರ ಚಿಂತಕ ಅಪ್ಪುಸಾಹೇಬ್, ಗೋಣಿಬಸಪ್ಪ, ಟಿ.ಶಫಿವುಲ್ಲಾ, ಪ್ರೊ. ಅಂಜನಮೂರ್ತಿ, ಜೆ.ಯಾದವರೆಡ್ಡಿ, ಸಿ.ಕೆ.ಗೌಸ್‍ಪೀರ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.