ತೀರ್ಥಹಳ್ಳಿ : ನನ್ನ ಮೈಯಲ್ಲಿ ಬಿಜೆಪಿ ರಕ್ತವೇ ಹರಿಯುತ್ತಿದ್ದು, ಬಿ.ವೈ. ರಾಘವೇಂದ್ರರನ್ನು ಸೋಲಿಸಿ ಅಪ್ಪ- ಮಕ್ಕಳ ಕೈಯಿಂದ ಪಕ್ಷವನ್ನು ಮುಕ್ತಗೊಳಿಸಲು ಅನಿವಾರ್ಯವಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ತಾಲೂಕಿನ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷ ಅಪ್ಪ-ಮಕ್ಕಳ ಕೈಯಲ್ಲಿದೆ. ಈ ಬಗ್ಗೆ ರಾಜ್ಯವ್ಯಾಪಿ ವಿರೋಧ ವ್ಯಕ್ತವಾಗುತ್ತಿದೆ. ಕುಟುಂಬ ರಾಜಕಾರಣ ಮಾಡುವ ಕಾಂಗ್ರೆಸ್
ಸಂಸ್ಕತಿಯನ್ನು ಬಿಜೆಪಿ ನಾಯಕರು ಟೀಕಿಸುತ್ತಾ ಬಂದಿದ್ದೇವೆ. ಆದರೆ, ಈಗ ಆ ಸಂಸ್ಕತಿ ರಾಜ್ಯ ಬಿಜೆಪಿಯಲ್ಲಿ ಮುಂದುವರೆಯುತ್ತಿದೆ. ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವ ಅಪ್ಪ ಮಕ್ಕಳ ರಾಜಕಾರಣ ವನ್ನು ಕೊನೆಗೊಳಿಸುವುದು. ಚುನಾವಣೆ ಯಲ್ಲಿ ಗೆದ್ದು ಪ್ರದಾನಿಯಾಗಲು ನರೇಂದ್ರ ಮೋದಿಯವರಿಗೆ ಕೈ ಎತ್ತುವುದೇ ನನ್ನ ಉದ್ದೇಶ ಎಂದರು.
ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಾನು ಈವರೆಗೆ ಪಕ್ಷದ ಆದೇಶವನ್ನು ಎಂದೂ ಮೀರಿಲ್ಲ. ಅಪ್ಪ-ಮಕ್ಕಳು ಸೇರಿ ಕೆಜೆಪಿ ಕಟ್ಟಿದಾಗ ಮಂತ್ರಿ ಸ್ಥಾನ ಬಿಟ್ಟು ಪಕ್ಷ ಸಂಘಟನೆ ಮಾಡಿ 46 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದೆ. ಆದರೆ, ಈಗ ಯಡಿಯೂರಪ್ಪ ಕುಟುಂಬ ದಿoದ ಮಾತ್ರ ರಾಜ್ಯದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬoತೆ ದೆಹಲಿ ನಾಯಕರನ್ನು ಮೋಡಿ ಮಾಡಿದ್ದಾರೆ ಎಂದು ದೂರಿದರು.
ಹೊಂದಾಣಿಕೆ ರಾಜಕಾರಣ ಮಾಡುವುದರಲ್ಲಿ ಅಪ್ಪ-ಮಕ್ಕಳು ನಿಸ್ಸೀಮರು. ತಮ್ಮ ಸ್ವಾರ್ಥಕ್ಕಾಗಿ ಸಿ.ಟಿ.ರವಿ, ಪ್ರತಾಪಸಿಂಹ, ಅನಂತ ಕುಮಾರ್, ಬಸವನ ಗೌಡ ಪಾಟೀಲ್
ಯತ್ನಾಳ್ ಮುಂತಾದ ಹಿಂಧುತ್ವವಾದಿ ಗಳನ್ನು ತುಳಿದಿದ್ದಾರೆ. ಈ ಬಗ್ಗೆಯೂ ರಾಜ್ಯದಾದ್ಯಂತ ತೀವ್ರ ಅಸಮಾಧಾನ ವ್ಯಕ್ತವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಹಿಂದುಳಿದವರ ಮತ್ತು ದಲಿತರನ್ನು ಒಗ್ಗೂಡಿಸುವ ಸಲುವಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆಗೆ ಮಾಡಿದಾಗ ಯಡಿಯೂರಪ್ಪ ಕೇಂದ್ರ ನಾಯಕರಿಗೆ ಹೇಳಿ ಅದನ್ನು ಕೈ ಬಿಡುವಂತೆ ಮಾಡಿದರು ಎಂದು ಆರೋಪಿಸಿದರು.
ಪ್ರಪಂಚದ ಯಾವುದೇ ಶಕ್ತಿ ಅಡ್ಡಿ ಮಾಡಿದರೂ ನರೇಂದ್ರ ಮೋದಿಯವರು ಪ್ರದಾನಿಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ 27 ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಶಿವಮೊಗ್ಗದಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು, ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತಬೇಕು ಎಂದರು.
ಹಿಂದಿನ ಬಾರಿ ಯಡಿಯೂರಪ್ಪನವರನ್ನು ಅಧಿಕಾರದಿಂದ ಇಳಿಸಿದ ಕಾರಣ ದಿಂದಲೇ ಇಷ್ಟಾದರು ಶಾಸಕ ಸ್ಥಾನ ಬಂದಿದೆ. ಶಿಕಾರಿಪುರದಲ್ಲಿ 60 ಸಾವಿರ ಅಂತರದಲ್ಲಿ ಗೆಲ್ಲುತ್ತಿದ್ದವರು. ಕಳೆದ ಬಾರಿ ಕೊಟ್ಯಾಂತರ ವೆಚ್ಚ ಮಾಡಿಯೂ ಕೇವಲ 10 ಸಾವಿರ ಅಂತರದಲ್ಲಿ ಗೆದ್ದಿರೋದು. ನನ್ನ ಮೇಲೆ ಯಾವುದೇ ರೀತಿಯ ಬಲ ಪ್ರಯೋಗ ಮಾಡುವ ಶಕ್ತಿ ಯಾರಿಗೂ ಇಲ್ಲ. ಅಂತಹ ಅವಕಾಶವೂ ಇಲ್ಲ ಎಂದರು.
ಈ ತಾಲೂಕಿನಲ್ಲಿ ಬಿ.ವೈ.ರಾಘವೇಂದ್ರ ನೆರವಿನಿಂದಲೇ ಅಕ್ರಮ ಮರಳು ಗಣಿಗಾರಿಕೆ ಮುಂತಾದ ಚಟುವಟಿಕೆಗಳು ನಿರಾತಂಕವಾಗಿ ನಡೆಯುತ್ತಿದೆ. ಇದಕ್ಕೆ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ಬೆಂಬಲ ಇದೆಯೇ ಎಂಬ ಅನುಮಾನವೂ ಇದೆ ಎಂದು ಹೇಳಿದರು.