ವಡ್ಡೇರಹಟ್ಡಿ : (ಅರಭಾವಿ) : ಕೇಂದ್ರದ ಬಿಜೆಪಿ ಸರ್ಕಾರ ಕಳೆದ 10 ವರ್ಷಗಳಿಂದ ಕರ್ನಾಟಕಕ್ಕೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಾ ಬಂದಿದ್ದು, ಬಡ ಜನರಿಗೆ ನೀಡಲಾಗುವ ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡಿತು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಅರಭಾವಿ ವಿಧಾನಸಭಾ ಕ್ಷೇತ್ರದ ವಡ್ಡೇರಹಟ್ಡಿಯಲ್ಲಿ ಶನಿವಾರ ನಡೆದ ಜಿಲ್ಲಾ ಪಂಚಾಯತ್ ಸಮ್ಮಿಲನ ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಅಕ್ಕಿ ಕೊಡುವ ವಿಷಯದಲ್ಲೂ ಕೇಂದ್ರ ರಾಜಕೀಯ ಮಾಡಿತು. ಕೇಂದ್ರ ಸರ್ಕಾರ ಏನಿದ್ದರೂ ಶ್ರೀಮಂತರ ಪರ. ಅಂಬಾನಿ, ಅದಾನಿ ಅವರ ಸಾಲ ಮನ್ನಾ ಮಾಡುವ ಮೂಲಕ ಶ್ರೀಮಂತರ ಪರ ಎಂದು ನಿರೂಪಿಸಿದೆ. ಬಡವರ ಬಗ್ಗೆ ಸ್ವಲ್ಪವೂ ಕಾಲಜಿ ಹೊಂದಿಲ್ಲ ಎಂದು ಸಚಿವರು ಟೀಕಿಸಿದರು. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಬೆಂಬಲಿಸಿ*
ಕಾಂಗ್ರೆಸ್ ಪಕ್ಷ ಎಂದರೆ ಬದ್ದತೆ, ನುಡಿದಂತೆ ನಾವು ನಡೆದಿದ್ದೇವೆ. ಚುನಾವಣೆಗೂ ಮುನ್ನ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೊಳಿಸಿದರು. ಸಿದ್ದರಾಮಯ್ಯನವರಿಗೆ ಇರುವ ಬಡವರ ಪರ ಕಾಳಜಿಯೇ ಇದಕ್ಕೆ ಸಾಕ್ಷಿ ಎಂದರು.
ನನ್ನ ಮಗ ಮೃಣಾಲ್ ಹೆಬ್ಬಾಳ್ಕರ್ ಅವರ ವಿಚಾರಧಾರೆಗಳು ತುಂಬಾ ದೊಡ್ಡದಿದೆ. ನನ್ನ ಹಾಗೆಯೇ ನನ್ನ ಮಗ ಕೂಡ ಬದ್ದತೆ ಹೊಂದಿದ್ದಾನೆ. ತಾಯಿಯಂತೆ ಮಗ ಕೂಡ ಅಭಿವೃದ್ಧಿಯ ಬಗ್ಗೆ ದೊಡ್ಡ ಚಿಂತನೆ ಹೊಂದಿದ್ದಾನೆ. ಒಂದು ಬಾರಿ ಮೃಣಾಲ್ಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡದೆ, ಧರ್ಮದಿಂದ ರಾಜಕೀಯ ಮಾಡುತ್ತಿದ್ದೇವೆ ಎಂದು ಹೇಳಿದರು.
ಜಗದೀಶ್ ಶೆಟ್ಟರ್ ವಿರುದ್ಧ ಕಿಡಿ : ಮುಖ್ಯಮಂತ್ರಿ ಆದ ಮೇಲೂ ಕ್ಯಾಬಿನೆಟ್ ಮಂತ್ರಿಯಾದ ಶೆಟ್ಟರ್, ನಿಜಕ್ಕೂ ಸ್ವಾರ್ಥ ರಾಜಕಾರಣಿ. ಇಲ್ಲಿಗೆ ಬಂದು ಮತ ಕೇಳಲು ಅವರಿಗೆ ನೈತಿಕತೆ ಇಲ್ಲ. ಮನೆ ಮಗ ಮೃಣಾಲ್ ಅವರನ್ನು ಬೆಂಬಲಿಸಿ. ಈ ಭಾಗದಿಂದ ಹೆಚ್ಚು ಮತಗಳ ಮುನ್ನಡೆಯ ನಿರೀಕ್ಷೆಯಲ್ಲಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಟೇಬಲ್ ಕುಟ್ಟಿ ಕೇಳುವೆ ಎಂದ ಮೃಣಾಲ್ ಹೆಬ್ಬಾಳ್ಕರ್ ಬೆಳಗಾವಿ ಅಭಿವೃದ್ಧಿಗೆ ನನ್ನದೇ ಆದ ಕನಸುಗಳಿವೆ. ನಾನು ಸಂಸದನಾದರೆ ನಮ್ಮ ಜಿಲ್ಲೆಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವೆ. ನಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳಲು ಟೇಬಲ್ ಕುಟ್ಟಿ ಕೇಳುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಹೇಳಿದರು. ನಮಗೆ ಬರಬೇಕಾದ ಅನುದಾನ ಕೇಳಲು ನಾನು ಹಿಂಜರಿಯುವುದಿಲ್ಲ. ನಮ್ಮ ಜಿಲ್ಲೆಗೆ ಕೈಗಾರಿಕೆಗಳು, ಸಾಫ್ಟ್ವೇರ್ ಕಂಪನಿಗಳು ಬರಬೇಕು. ಇದಕ್ಕೆ ನಾನು ಹೋರಾಟ ಮಾಡಲು ಸಿದ್ಧ ಎಂದು ಮೃಣಾಲ್ ಹೇಳಿದರು
ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ* ವಡ್ಡೇರಹಟ್ಡಿ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮೃಣಾಲ ಹೆಬ್ಬಾಳಕರ್ ಮಾಲಾರ್ಪಣೆ ಮಾಡಿದರು. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಕರೆ ತರಲಾಯಿತು.
ಸಮಾರಂಭದಲ್ಲಿ ಮುಖಂಡರಾದ ಅನಿಲ್ ಕುಮಾರ್ ದೇಸಾಯಿ, ಭೀಮಪ್ಪ ಹಂದಿಗುಂದ್, ರಮೇಶ ಉಟಗಿ, ಲಕ್ಕಣ್ಣ ಸವಸುದ್ದಿ, ಕೌಜಲಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಅರಳಿ, ಸುರೇಶ್ ಮಗದುಮ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ್ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಲಗಮಣ್ಣ ಕಳಸನವರ್, ಜಿಲ್ಲಾ ಕಾಂಗ್ರೆಸ್ ಕಿಸಾನ್ ಮೋರ್ಚಾದ ಅಧ್ಯಕ್ಷ ಕಲ್ಲಪ್ಪ ಗೌಡ ಲಕ್ಕಾರ್, ಬಸವರಾಜ ಹುಡೇದ್ ಸೇರಿದಂತೆ ಗ್ರಾಮದ ಹಲವು ಮುಖಂಡರು ಉಪಸ್ಥಿತರಿದ್ದರು.