ಬೆಂಗಳೂರು : ನರೇಂದ್ರ ಮೋದಿ ಮಾಡಿರುವ ಅನ್ಯಾಯವನ್ನು ನಾನು ಪಟ್ಟಿ ಮಾಡಿ ಹೇಳಿದರೆ ಸಿದ್ದರಾಮಯ್ಯನಿಗೆ ದುರಹಂಕಾರ ಎನ್ನುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರೊ.ರಾಜೀವ್ ಗೌಡ ಪರ ಸುಬ್ರಹ್ಮಣ್ಯಪುರ ಸರ್ಕಲ್‌ನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸತ್ಯ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ರು ಅಂತಾರೆ. 15 ಲಕ್ಷ ಕೊಡ್ತೀವಿ ಅಂದ್ರು ಕೊಡಲಿಲ್ಲ. ಎಲ್ಲ ಬೆಲೆ ಇಳಿಸುತ್ತೇವೆ ಅಂದ್ರು, ಇಳಿಸಲಿಲ್ಲ. ನಾನು 5 ಗ್ಯಾರಂಟಿ ಘೋಷಣೆ ಮಾಡಿದ್ದೆ. ನುಡಿದಂತೆ ನಡೆದಿದ್ದೇನೆ. ನರೇಂದ್ರ ಮೋದಿ ಮಾಡಿರುವ ಅನ್ಯಾಯವನ್ನು ನಾನು ಪಟ್ಟಿ ಮಾಡಿ ಹೇಳಿದರೆ ಸಿದ್ದರಾಮಯ್ಯನಿಗೆ ದುರಹಂಕಾರ ಎನ್ನುತ್ತಾರೆ ಎಂದು ಟೀಕಿಸಿದರು.
ಕರ್ನಾಟಕಕ್ಕೆ ಕೊಡಬೇಕಾದ ಹಣವನ್ನ ನೀಡಿದ್ದೇವೆ ಅಂತಾರೆ. ಆದರೆ ಅದನ್ನು ನೀಡಿಲ್ಲ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ಹಣ ನೀಡಲಿಲ್ಲ. 5,300 ಕೋಟಿ ಹಣವನ್ನ ಭದ್ರ ಅಪ್ಪರ್ ಯೋಜನೆಗೆ ನೀಡ್ತಿವಿ ಅಂದ್ರು. ಒಂದು ರೂಪಾಯಿ ಬರಲಿಲ್ಲ. ಕರ್ನಾಟಕದಿಂದ 25 ಜನ ಹೋಗಿದ್ದಾರೆ.
ಯಾರಾದ್ರೂ ಬಾಯಿ ಬಿಟ್ಟಿದ್ದೀರಾ? ಶೋಭಾ ಕರಂದ್ಲಾಜೆ ಅವರು ಬಾಯಿ ಬಿಟ್ಟಿದ್ದಾರಾ? ಇವ್ರು ಯಾರಾದ್ರೂ ನ್ಯಾಯ ಕೇಳಿದ್ದಾರಾ? ನಾನು ನ್ಯಾಯ ಕೇಳಿದ್ರೆ ಹಿಂದೂ ವಿರೋಧಿ ಅಂತಾರೆ. ಶ್ರೀರಾಮನ ವಿರೋಧಿ ಅಂತಾರೆ. ನಾನೇಕೆ ಹಿಂದೂ ವಿರೋಧಿ? ನಾನು ಹಿಂದೂನೆ. ನನ್ನ ಹೆಸರಿನಲ್ಲೇ ರಾಮ ಇದ್ದಾನೆ. ನಾನು ಸಿದ್ದರಾಮಯ್ಯ. ನಾನು ನ್ಯಾಯ ಕೇಳೋದು ತಪ್ಪಾ ಎಂದು ಕೇಳಿದರು.
ಕರ್ನಾಟಕಕ್ಕೆ ತೆರಿಗೆಯಲ್ಲಿ ದೊಡ್ಡ ಅನ್ಯಾಯವಾಗಿದೆ. ಕರ್ನಾಟಕದವರೇ ನಿರ್ಮಲಾ ಸೀತಾರಾಮನ್ ಹಣಕಾಸು ಮಂತ್ರಿಯಾಗಿದ್ದಾರೆ. ಎರಡು ವರದಿಯನ್ನ ಹಣಕಾಸು ಆಯೋಗ ನೀಡುತ್ತೆ. ನಮಗೆ 5 ಸಾವಿರ ಕೋಟಿ ಬರಲಿಲ್ಲ. ಬೆಂಗಳೂರು ಪೆರಿಪೆರಲ್ ರೋಡ್‌ಗೆ 3 ಸಾವಿರ ಕೋಟಿ ಬಂದಿಲ್ಲ. 11,495 ಕೋಟಿ ರೂ. ಬೆಂಗಳೂರು ನಗರಕ್ಕೆ ಅನ್ಯಾಯ ಆಗಿದೆ ಅಂತ ಹಣಕಾಸು ಆಯೋಗ ಶಿಫಾರಸು ಮಾಡಿದೆ.
ಕರ್ನಾಟಕದಿಂದ 25 ಜನ ಬಿಜೆಪಿ ಸಂಸದರು ಒಂದು ದಿನವು ಕೇಳಿಲ್ಲ. ಇಲ್ಲಿನ ಬಿಜೆಪಿ ಅಭ್ಯರ್ಥಿಯಾಗಿದ್ದಾರಲ್ಲ, ಕೇಂದ್ರದಲ್ಲಿ ಕೃಷಿ ಸಚಿವರಾಗಿದ್ದಾರೆ. ಅನುದಾನ ಕೊಡಿ ಅಂತಾ ಬಾಯಿ ಬಿಟ್ಟಿದ್ದಾರಾ? ಅವರಿಗೆ ವೋಟು ಕೊಡಬಾರದು. ಬರಗಾಲ ಇದೆ. ಅಮಿತ್ ಶಾ ಚನ್ನಪಟ್ಟಣದಲ್ಲಿ ವೋಟು ಕೇಳೋಕೆ ಬರ್ತಾರೆ. ನಿರ್ಮಲಾ ಸೀತಾರಾಮನ್ ಕೋಡ್ ಆಫ್ ಕಂಡಕ್ಟ್ ಇರೋದಕ್ಕೆ ಕೊಡಲು ಆಗಿಲ್ಲ ಅಂತಾರೆ. ಅಮಿತ್ ಶಾ ಒಂದು ಸುಳ್ಳು ಹೇಳ್ತಾರೆ, ನಿರ್ಮಲಾ ಸೀತಾರಾಮನ್ ಸುಳ್ಳು ಹೇಳ್ತಾರೆ ಎಂದು ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರು-ಉಡುಪಿಯಿಂದ ರಿಜೆಕ್ಟ್ ಮಾಡಿ, ಗೋಬ್ಯಾಕ್ ಶೋಭಾ.. ನೀನು ಹೋಗಮ್ಮ ಅಂತ ಕಳಿಸಿದ್ದಾರೆ. ನಾವು ಗೋಬ್ಯಾಕ್ ಅಂತೀವಿ. ದಯಮಾಡಿ ಹೋಗಿ ಅಂತಾ ನೀವೆಲ್ಲ ಹೇಳಬೇಕು. ರಾಜೀವ್ ಗೌಡರನ್ನ ಗೆಲ್ಲಿಸಬೇಕು. ಬಿಜೆಪಿಯವರು ನುಡಿದಂತೆ ನಡೆದಿಲ್ಲ. 10 ವರ್ಷದಲ್ಲಿ ಕರ್ನಾಟಕದ ಬೆಂಗಳೂರಿಗೆ ಏನ್ ಮಾಡಿದ್ದಾರೆ. ಪೆಟ್ರೋಲ್-ಡೀಸೆಲ್, ಗ್ಯಾಸ್ ಬೆಲೆ ಹೆಚ್ಚಾಗಿದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.