ರಾಂಚಿ : ಪ್ರಕರಣವೊಂದರಲ್ಲಿ ಇಲಿಗಳೇ ಸಾಕ್ಷ್ಯವನ್ನು ನಾಶಪಡಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಕೋರ್ಟ್ಗೆ ತನಿಖಾ ವರದಿ ಸಲ್ಲಿಸಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹೌದು. ವ್ಯಕ್ತಿಯೊಬ್ಬನಿಂದ ಜಪ್ತಿ ಮಾಡಿ ಗೋದಾಮಿನಲ್ಲಿ ಇರಿಸಲಾಗಿದ್ದ ಸುಮಾರು 10 ಕೆಜಿ ಗಾಂಜಾ , 9 ಕೆಜಿ ಭಾಂಗ್ ಅನ್ನು ಇಲಿಗಳೇ ತಿಂದುಬಿಟ್ಟಿವೆ ಎಂದು ಜಾರ್ಖಂಡ್ನ ಧನ್ಬಾದ್ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. 2018ರ ಡಿಸೆಂಬರ್ 14 ರಂದು ಇಲ್ಲಿನ ಪೊಲೀಸರು ನಡೆಸಿದ ದಾಳಿಯಲ್ಲಿ ಶಂಭು ಅಗರ್ವಾಲ್ ಆರೋಪಿಯಿಂದ ಗಾಂಜಾ ಮತ್ತು ಭಾಂಗ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ ಮಾದಕ ವಸ್ತುಗಳನ್ನು ಹೊಂದಿದ್ದಕ್ಕಾಗಿ ಆರೋಪಿಯನ್ನ ಬಂಧಿಸಲಾಗಿತ್ತು.
ಏತನ್ಮಧ್ಯೆ, ಶಂಭು ಅಗರ್ವಾಲ್ ಪರ ವಕೀಲರು, ತಮ್ಮ ಕಕ್ಷಿದಾರರನ್ನು ತಪ್ಪಾಗಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಕೋರ್ಟ್ಗೆ ಸಾಕ್ಷಿ ಮುಖ್ಯ, ಅದರ ಆಧಾರದ ಮೇಲೆಯೇ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಪೊಲೀಸರು ವಸ್ತುಗಳನ್ನು ಜಪ್ತಿ ಮಾಡಿರುವುದು ನಿಜವೇ ಆದಲ್ಲಿ, ಏಕೆ ಕೋರ್ಟ್ಗೆ ಸಲ್ಲಿಸಲು ಆಗಲಿಲ್ಲ. ನನ್ನ ಕಕ್ಷಿಗಾರರನ್ನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಸದ್ಯ ಈ ಪ್ರಕರಣದ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದ್ದು, ತನಿಖೆ ಮುಂದುವರಿದಿದೆ.