ಗೋಕಾಕ್ : ಕ್ಷೇತ್ರದಾದ್ಯಂತ ನಿರೀಕ್ಷೆಗೂ ಮೀರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸಿಗುತ್ತಿದೆ. ಈ ಬೆಂಬಲ ನೋಡಿ ಮೃಣಾಲ ಹೆಬ್ಬಾಳಕರ್ ಆಯ್ಕೆಯಾಗಿ ದೆಹಲಿಗೆ ಹೋಗುವುದು ಖಚಿತ ಎನ್ನುವ ವಿಶ್ವಾಸ ಇಮ್ಮಡಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಅಂಕಲಗಿ ಹಾಗೂ ಸಾವಳಗಿಯಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಮತಯಾಚಿಸಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷದಿಂದ ಮಾತ್ರ ರಾಜ್ಯ, ದೇಶ ಅಭಿವೃದ್ಧಿ ಸಾಧ್ಯ ಎನ್ನುವುದು ಜನರಿಗೆ ಮನವರಿಕೆಯಾಗಿದೆ ಎಂದು ಹೇಳಿದರು.
ಕಳೆದ ವರ್ಷ ನಡೆದ ವಿಧಾನಸಭೆಯ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಪಂಚ ಯೋಜನೆಗಳ ಗ್ಯಾರಂಟಿ ನೀಡಿತ್ತು. ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆಗೊಳಿಸಿದೆವು. ಇದು ಸರ್ಕಾರಕ್ಕೆ ಬಡಜನರ ಮೇಲೆ ಇರುವ ಬದ್ಧತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಪಾಲಿಗೆ ಅನ್ನರಾಮಯ್ಯ ಆಗಿದ್ದಾರೆ ಎಂದರು.
ನಮ್ಮ ಪಾಲಿನ ಜಿಎಸ್ ಟಿ ಮೊತ್ತವನ್ನು ನಮಗೆ ಕೊಡದೆ, ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಬಡಜನರಿಗೆ ಕೊಡುವ ಅಕ್ಕಿಯಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿ ತಂದಂತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 25 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು ತರಲಾಗುವುದು ಎಂದು ಹೇಳಿದರು.
ಸೋತ ಜಾಗದಲ್ಲೇ ಗೆಲ್ಲುವೆ : 2013ರ ವಿಧಾನಸಭೆ, 2014ರ ಲೋಕಸಭೆ ಚುನಾವಣೆಗಳಲ್ಲಿ ನಾನು ಸೋಲು ಕಂಡೆ. ಆದರೆ, ಛಲ ಬಿಡದೆ ಪಕ್ಷ ಸಂಘಟಿಸಿ ಸೋತ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೆ ಗೆದ್ದೆ, ಇದೀಗ ಮಗನ ಮೂಲಕ ಬೆಳಗಾವಿ ಲೋಕಸಭೆಯಲ್ಲಿ ಗೆಲ್ಲಬೇಕು. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಕೆಲಮಂದಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇಂಥ ಅಪಮಾನಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ನೀಡಿದ್ದಾನೆ. ಟೀಕಾಕಾರಿಗೆ ಮುಂದಿನ ದಿನಗಳಲ್ಲಿ ಮತರಾರರು ಮತ್ತು ಭಗವಂತ ಉತ್ತರ ನೀಡಲಿದ್ದಾರೆ ಎಂದು ಸಚಿವರು ಹೇಳಿದರು. ಜಗದೀಶ್ ಶೆಟ್ಟರ್ ವಿರುದ್ಧ ಕಿಡಿಕಾರಿದ ಸಚಿವರು
ಎರಡು ತಿಂಗಳ ಹಿಂದಷ್ಟೇ ಬಿಜೆಪಿ ನಾಯಕರನ್ನು ಹೀನಾಯವಾಗಿ ಟೀಕಿಸುತ್ತಿದ್ದ ಜಗದೀಶ್ ಶೆಟ್ಟರ್ ಇಂದು ಯಾವ ನೈತಿಕತೆ ಇಟ್ಟುಕೊಂಡು ಜನರ ಎದುರು ಬರುತ್ತಿದ್ದಾರೆ ಎಂದು ಸಚಿವರು ಟೀಕಿಸಿದರು. ಬಿಜೆಪಿಯಿಂದ ಅನ್ಯಾಯವಾಗಿದೆ ಎಂದು ಒಂದು ವರ್ಷದ ಕೆಳಗೆ ಕಾಂಗ್ರೆಸ್ ಪಕ್ಷ ಸೇರಿದ್ದ ಶೆಟ್ಟರ್ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿದರೂ ಅವರ ಹಿರಿತನಕ್ಕೆ ಬೆಲೆಕೊಟ್ಟು ಅವರನ್ನು ವಿಧಾನ ಪರಿಷತ್ ಗೆ ಕಳುಹಿಸಲಾಯಿತು. ಆದರೆ ನಮಗೆ ನಂಬಿಕೆ ದ್ರೋಹ ಎಸಗಿದ ಶೆಟ್ಟರ್, ಮತ್ತೆ ಬಿಜೆಪಿ ಸೇರಿದರು. ಮುಖ್ಯಮಂತ್ರಿ, ಬೆಳಗಾವಿ ಉಸ್ತುವಾರಿ ಸಚಿವರಾಗಿದ್ದ ಶೆಟ್ಟರ್, ಜಿಲ್ಲೆಯ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಿ, ಇದೀಗ ಬೆಳಗಾವಿ ನನ್ನ ಕರ್ಮಭೂಮಿ ಎಂದು ನಾಟಕ ಆಡುತ್ತಿದ್ದಾರೆ ಎಂದು ಸಚಿವರು ಕಿಡಿ ಕಾರಿದರು.
ಕಾಂಗ್ರೆಸ್ ನಿಂದ ಅಭಿವೃದ್ಧಿ ಸಾಧ್ಯ: ಮೃಣಾಲ್ ಹೆಬ್ಬಾಳ್ಕರ್ಅಂ ಕಲಗಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್, ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಈ ಬಾರಿ ಬೆಳಗಾವಿ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು ಖಚಿತ ಎಂದು ಹೇಳಿದರು. ಕ್ಷೇತ್ರದ ಮನೆ ಮಗನಾಗಿ ನಾನು ದುಡಿಯುವೆ. ನಿಮ್ಮ ಮನೆ ಮಗನಿಗೆ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಪ್ರಚಾರಕ್ಕೆ ಹೋದಲೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಜನರ ಪ್ರತಿಕ್ರಿಯೆ ನೋಡಿದರೆ ದಿನದಿಂದ ದಿನಕ್ಕೆ ನನಗೆ ಹುಮ್ಮಸ್ಸು ಜಾಸ್ತಿ ಆಗುತ್ತಿದೆ ಎಂದು ಹೇಳಿದರು. ಹೊರಗಿನ ಅಭ್ಯರ್ಥಿ ಬದಲಿಗೆ ನಿಮ್ಮ ಮನೆ ಮಗನಾದ ನನ್ನನ್ನು ಬೆಂಬಲಿಸಿ, ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುವೆ ಎಂದು ಹೇಳಿದರು.
ಸರ್ವಾಧಿಕಾರ ವ್ಯವಸ್ಥೆ ವಿರುದ್ಧ ಹೋರಾಟ ಬ್ರಿಟಿಷರದ ವಿರುದ್ಧ ಹೋರಾಡಿದ ಕಾಂಗ್ರೆಸ್ ಪಕ್ಷದ ಅಂದು ಭಾರತವನ್ನು ಗುಲಾಮ ಗಿರಿಯಿಂದ ಪಾರು ಮಾಡಿತು. ಇದೀಗ ಕೇಂದ್ರದಲ್ಲಿ ಸರ್ವಾಧಿಕಾರಿ ಧೋರಣೆ ಮುಂದುವರಿದಿದೆ. ಇದರ ವಿರುದ್ಧ ಹೋರಾಡುವ ಸಮಯ ಮತ್ತೆ ಬಂದಿದೆ ಎಂದು ಅಂಕಲಗಿ ಗ್ರಾಮದ ಮುಖಂಡ ಬಸನಗೌಡ ಹೊಳಾಚಿ ಹೇಳಿದರು.
ಗೋಕಾಕ್ ನಲ್ಲೂ ಸರ್ವಾಧಿಕಾರಿ ಧೋರಣೆ ಇದ್ದು, ಈ ಬಾರಿ ಅವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು. ನಮ್ಮ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರು ಯೋಗ್ಯರಾಗಿದ್ದು, ತಾಯಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದಾರೆ. ಇಂತ ಯುವ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮಠ, ಮಂದಿರಗಳಿಗೆ ಭೇಟಿ ಅಂಕಲಗಿಯಲ್ಲಿರುವ ಪಾವನ ಕ್ಷೇತ್ರ ಶ್ರೀ ಅಡವಿ ಸಿದ್ದೇಶ್ವರ ಸಂಸ್ಥಾನ ಮಠಕ್ಕೆ ಭೇಟಿ ನೀಡಿದ ಸಚಿವರು, ಶ್ರೀ ಅಮರ ಸಿದ್ದೇಶ್ವರ ಮಹಾ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು. ಇದೇ ವೇಳೆ ಹೂಮಳೆಯ ಮೂಲಕ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದರು. ಬಳಿಕ ಸಾವಳಗಿ ಗ್ರಾಮದಲ್ಲಿರುವ ಶಿವಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ಇದೇ ವೇಳೆ ಮುಖಂಡರಾದ ಡಾ.ಮಹಾಂತೇಶ್ ಕಡಾಡಿ, ಅಶೋಕ್ ಪೂಜಾರಿ ಸೇರಿದಂತೆ ಹಲವಾರು ಮುಖಂಡರು ಸಚಿವರಿಗೆ ಪ್ರಚಾರದ ವೇಳೆ ಸಾಥ್ ನೀಡಿದರು.