Breaking
Wed. Dec 25th, 2024

ಸ್ವತಂತ್ರ ಅಭ್ಯರ್ಥಿ ಪಂಡಿತ್ ಕೇಶವ್ ದೇವ್ ಗೌತಮ್  ಚಪ್ಪಲಿ ಹಾರ ಹಾಕಿಕೊಂಡು ಚುನಾವಣಾ ಪ್ರಚಾರ ಆರಂಭ

ಲಕ್ನೋ: ಲೋಕಸಭಾ ಚುನಾವಣೆಗೆ 2024 ದೇಶಾದ್ಯಂತ ಬಿಸಿ ಬಿಸಿ ವಾತಾವರಣ ನಿರ್ಮಾಣವಾಗಿದೆ. ಚುನಾವಣೆ ಗೆಲ್ಲಲು ಅಭ್ಯರ್ಥಿಗಳು ಹೊಸ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಅಂತೆಯೇ ಉತ್ತರಪ್ರದೇಶದ ಅಲಿಗಢ್‌ನಲ್ಲಿ ಅಭ್ಯರ್ಥಿಯೊಬ್ಬರು ಅಚ್ಚರಿ ಮೂಡಿಸುವ ಕೆಲಸ ಮಾಡಿದ್ದಾರೆ.

ಹೌದು. ಯಾರನ್ನಾದರೂ ಶಿಕ್ಷಿಸಲು ಅಥವಾ ಅವಮಾನಿಸಲು ಚಪ್ಪಲಿ ಹಾರವನ್ನು ಧರಿಸುವುದನ್ನು ನೀವು ಆಗಾಗ್ಗೆ ನೋಡಿರಬಹುದು. ಆದರೆ ಅಲಿಗಢದ  ಸ್ವತಂತ್ರ ಅಭ್ಯರ್ಥಿ ಪಂಡಿತ್ ಕೇಶವ್ ದೇವ್ ಗೌತಮ್  ಚಪ್ಪಲಿ ಹಾರ ಹಾಕಿಕೊಂಡು ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಹೂವಿನ ಹಾರದ ಬದಲು ಚಪ್ಪಲಿ ಹಾರ ಹಾಕಿಕೊಂಡು ಮತ ಯಾಚಿಸಿದ್ದನ್ನು ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಚಪ್ಪಲಿ ಹಾರ ಯಾಕೆ..?: ಪಂಡಿತ್ ಕೇಶವ್ ದೇವ್ ಅವರು ಸ್ವತಂತ್ರ ಅಭ್ಯರ್ಥಿಯಾಗಿದ್ದು, ಅವರ ಚುನಾವಣಾ ಚಿಹ್ನೆ ಚಪ್ಪಲಿ ಆಗಿದೆ. ಸ್ವತಃ ಕೇಶವ್ ದೇವ್ ಅವರೇ ಚಪ್ಪಲಿ ಚುನಾವಣಾ ಚಿಹ್ನೆಗೆ ಅರ್ಜಿ ಸಲ್ಲಿಸಿರುವುದಾಗಿದೆ. ಅದರಂತೆ ಚಿಹ್ನೆ ದೊರೆತ ಬಳಿಕ ಕೊರಳಿಗೆ 7 ಚಪ್ಪಲಿಗಳನ್ನು ಹಾರ ಮಾಡಿ ಹಾಕಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಕೇಶವ್‌ ಅವರು ಭ್ರಷ್ಟಾಚಾರವನ್ನು ವಿರೋಧಿಸುವ ಮೂಲಕವೂ ಸುದ್ದಿಯಲ್ಲಿದ್ದಾರೆ.

ಮರದ ಮೇಲೆ ಕುಳಿತು ಬಂದಿದ್ದರು: RTI ಕಾರ್ಯಕರ್ತನಾಗಿರುವ ಪಂಡಿತ್ ಕೇಶವ್ ದೇವ್ ಅವರು ಭಾರತೀಯ ಹಿಂದೂ ರಾಷ್ಟ್ರ ಸೇನೆ ಮತ್ತು ಭ್ರಷ್ಟಾಚಾರ ವಿರೋಧಿ ಸೇನೆ ಎಂಬ ಸಂಘಟನೆಗಳನ್ನು ಸಹ ನಡೆಸುತ್ತಿದ್ದಾರೆ. ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಗರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಬೇಕಾಯಿತು. ಅಲ್ಲದೇ ಕಳೆದ ವರ್ಷ ಅಲಿಘರ್ ಮುನ್ಸಿಪಲ್ ಕಾರ್ಪೊರೇಶನ್‌ನ 69 ನೇ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಪಂಡಿತ್ ಕೇಶವದೇವ್ ಅವರು ತಮ್ಮ ಮನೆಯಿಂದ ಮರದ ಮೇಲೆ ಕುಳಿತು ಕಲೆಕ್ಟರೇಟ್‌ನಲ್ಲಿರುವ ನಾಮನಿರ್ದೇಶನ ಕೇಂದ್ರವನ್ನು ತಲುಪಿ ಸುದ್ದಿಯಾಗಿದ್ದರು. 

ಚುನಾವಣಾ ಕಣದಲ್ಲಿದ್ದಾರೆ 14 ಅಭ್ಯರ್ಥಿಗಳು: ಅಲಿಗಢ ಲೋಕಸಭಾ ಕ್ಷೇತ್ರಕ್ಕೆ ಎರಡನೇ ಹಂತದಲ್ಲಿ ಅಂದರೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಸೋಮವಾರ ನಾಮಪತ್ರ  ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇಬ್ಬರು ಪಕ್ಷೇತರರು ನಾಮಪತ್ರ ಹಿಂಪಡೆದಿದ್ದಾರೆ. ಈಗ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಮಾರ್ಚ್ 28ರಿಂದ ಏಪ್ರಿಲ್ 4ರವರೆಗೆ ಒಟ್ಟು 21 ಮಂದಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಲೋಪದೋಷ ಕಂಡು ಬಂದ ಹಿನ್ನೆಲೆಯಲ್ಲಿ 5 ಮಂದಿಯ ನಾಮಪತ್ರಗಳನ್ನು ರದ್ದುಗೊಳಿಸಲಾಗಿದೆ. ಇದಾದ ಬಳಿಕ ಸೋಮವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿತ್ತು. 

Related Post

Leave a Reply

Your email address will not be published. Required fields are marked *