ಹೊಸ ಯುಗದ ಆರಂಭ.. ವಸಂತ ಋತುವಿನ ಚೈತ್ರಮಾಸದ ಮೊದಲ ದಿನವೇ ಯುಗಾದಿ. ಪ್ರಕೃತಿಗೂ ಯುಗಾದಿಗೂ ಒಂದು ಅಪೂರ್ವ ನಂಟಿದೆ. ಗಿಡ-ಮರಗಳಲ್ಲಿ ಹಸಿರ ಚಿಗುರು ಪ್ರಕೃತಿಗೆ ಜೀವಕಳೆ ಬರುವ ಕಾಲ. ನವಚೈತನ್ಯ ತುರುವ ಸಂದರ್ಭ. ಪ್ರಕೃತಿಯ ರಮ್ಯಚೈತ್ರ ಕಾಲವೇ ಯುಗಾದಿ ।
ಜಗತ್ತು ಕಾಲಚಕ್ರದ ಪ್ರತೀಕ. ಕಾಲಚಕ್ರ ಉರುಳಿದಂತೆ ಬದಲಾವಣೆ ಆಗುತ್ತಿದೆ. ಬದಲಾವಣೆ ಜಗದ ನಿಯಮ ಎಂಬ ಮಾತಿನಂತೆ. ಪ್ರಕೃತಿಯ ಮಡಿಲಿನಲ್ಲಿ ಬೀಜ ಮೊಳಕೆ ಒಡೆಯುತ್ತದೆ. ಗಿಡವಾಗುತ್ತದೆ. ಗಿಡ ಮರವಾಗಿ ಬೆಳೆಯುತ್ತದೆ. ಮರದಲ್ಲಿ ಹೂವು ಬಿಡುತ್ತದೆ. ಹೂವು ಕಾಯಾಗಿ, ಕಾಯಿ ಹಣ್ಣಾಗುತ್ತದೆ. ಹಣ್ಣಿನ ಮತ್ತೊಂದು ಗಿಡದ ಹುಟ್ಟಿಗೆ ಬೀಜ.
ಪ್ರಕೃತಿಯ ಚೈತ್ರ ಕಾಲವನ್ನು ಭಾರತೀಯರು ಸಾಂಪ್ರದಾಯಿಕವಾಗಿ ಸ್ವಾಗತಿಸುತ್ತಾರೆ. ‘ಯುಗಾದಿ’ ಹಬ್ಬ ಆಚರಿಸುತ್ತಾರೆ. ಬದುಕಿನಲ್ಲಿ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವ ಸಂಕೇತವಾಗಿ ಬೇವು-ಬೆಲ್ಲವನ್ನು ತಿನ್ನುತ್ತಾರೆ. ಬೆಲ್ಲವೆಂಬ ಸಿಹಿ ಮತ್ತು ಬೇವು ಎಂಬ ಕಹಿ ಎರಡನ್ನೂ ಪ್ರಕೃತಿಯೇ ನಮಗೆ ಕೊಟ್ಟಿದೆ.
ಅಂದರೆ ಮನುಷ್ಯನ ಬದುಕಿನಲ್ಲಾಗುವ ಎಲ್ಲಾ ಬದಲಾವಣೆ ಮತ್ತು ಅನುಭವಗಳಿಗೆ ಪ್ರಕೃತಿಯೇ ಆಧಾರ. ಹಬ್ಬ ಎಂದರೆ ಸಂಭ್ರಮ. ಮನೆಯನ್ನು ಶುಚಿಗೊಳಿಸಿ, ಮಾವು-ಬೇವು ತಳಿರು ತೋರಣದಿಂದ ಅಲಂಕರಿಸಿ ಚೈತ್ರದ ಚಿಗುರಿನ ಕಾಲವನ್ನು ಸ್ವಾಗತಿಸುವುದು, ದೇವಸ್ಥಾನಗಳಿಗೆ ತೆರಳಿ ಪೂಜೆ-ಪುನಸ್ಕಾರ ಮಾಡುವುದು, ಮನೆಯಲ್ಲಿ ರುಚಿ ರುಚಿಯಾದ ಭಕ್ಷ ಭೋಜ್ಯಗಳನ್ನು ಮಾಡಿ ಸವಿದು ಸಂಭ್ರಮಿಸುವ ಪರಿ ಇದ್ದೇ ಇರುತ್ತದೆ.
ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು ಅಂತ ಹಾಡೇ ಇದೆ. ಮಾವಿನ ಮರದಲ್ಲಿ ಮಾವಿನಕಾಯಿ ನಳನಳಿಸುತ್ತಿರುತ್ತವೆ. ಯುಗಾದಿ ಹಬ್ಬಕ್ಕೆ ಸಿಹಿಯಾದ ಹೋಳಿಗೆ ಜೊತೆಗೆ ಹುಳಿ ಮಾವಿನಕಾಯಿ ಚಿತ್ರಾನ್ನ ಇರಲೇಬೇಕು. ಹುಳಿ, ಸಿಹಿ, ಖಾರ ಯುಗಾದಿ ಹಬ್ಬಕ್ಕೆ ಪೂರಕ.
ಹೊಸತೊಡಕು : ಯುಗಾದಿ ಹಬ್ಬದ ಮಾರನೇ ದಿನ ಹೊಸತೊಡಕು ಹಬ್ಬ. ಆ ದಿನ ಮಾಂಸಾಹಾರದ್ದೇ ಕಾರುಬಾರು. ಕುರಿ-ಕೋಳಿಗಳನ್ನು ಬಲಿಕೊಟ್ಟು ಬಗೆಯ ಮಾಂಸದಡಿಗೆ ಮಾಡಿ ಸೇವಿಸುತ್ತಾರೆ. ಹೊಸತೊಡಕಿಗಾಗಿಯೇ ಅನೇಕರು ಮುಂಚಿತವಾಗಿ ಚೀಟಿ ಹಾಕಬೇಕು. ಚೀಟಿ ದುಡ್ಡಿನಲ್ಲಿ ಮಾಂಸ ಖರೀದಿಸಿ ಪರಸ್ಪರ ಹಂಚಿಕೊಳ್ಳುತ್ತಾರೆ. ಹಬ್ಬದ ದಿನ ಮಾರನೇ ದಿನ ಖಾರದ ಊಟ ಮಾಡಿ ಜನ ಸಂಭ್ರಮವನ್ನು ಸಿಹಿ ಮಾಡುತ್ತಾರೆ.