ಕಾರವಾರ : ಅತಿ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ವಿಶ್ರಾಂತಿ ಪಡೆಯುತಿದ್ದ ಮಗು ಸೇರಿ ಐವರು ಕಾರ್ಮಿಕರ ಮೇಲೆ ಹರಿದ ಘಟನೆ ಶಿರಸಿಯ ಹಿಪ್ನಳ್ಳಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಮಗು ಮತ್ತು ಕಾರ್ಮಿಕನೊಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಶಿರಸಿಯಿಂದ ಕುಮಟಾ ಕಡೆ ಹೋಗುತ್ತಿದ್ದ ಡಸ್ಟರ್ ಕಾರು, ರಸ್ತೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹರಿದಿದೆ. ಚಾಲಕನ ನಿರ್ಲಕ್ಷ್ಯ ಹಾಗೂ ಅತೀ ವೇಗದ ಪರಿಣಾಮ ಈ ಅಪಘಾತ ನಡೆದಿದೆ ಎಂದು ಆರೋಪಿಸಲಾಗಿದೆ. ಗಾಯಾಳುಗಳು ಹೈದರಾಬಾದ್ ಮೆಹಬೂಬ್ ನಗರದ ಕಾರ್ಮಿಕರು ಎಂದು ತಿಳಿದು ಬಂದಿದೆ. ಗಾಯಗೊಂಡಿರುವ ಮಗು ಸೇರಿ ಐದು ಜನರನ್ನು ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಾಯಾಳುಗಳನ್ನು ಹೈದರಾಬಾದ್ ಮೂಲದ ಮೆಹಬೂಬ್ ನಗರದ ನರಸಿಂಹ, ಲಾವಣ್ಯ , ಪಾರ್ವತಮ್ಮ, ಕಿಶನ್, ನಾಗಲಕ್ಷ್ಮಿ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.