ಚಿತ್ರದುರ್ಗ, ಏಪ್ರಿಲ್. 11 : 2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪಾರ್ಲಿಮೆಂಟ್ ಪ್ರವೇಶಿಸಿದ ಕಾಂಗ್ರೆಸ್‍ನ ಬಿ.ಎನ್.ಚಂದ್ರಪ್ಪನವರ ಸಾಧನೆ ಮಾತ್ರ ಶೂನ್ಯ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳ್ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್‍ರವರ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಬುದ್ದರು ಹಾಗೂ ಪ್ರಮುಖ ಉದ್ಯಮಿಗಳ ಜೊತೆ ಮಾತನಾಡಿದ ಗೋವಿಂದ ಕಾರಜೋಳರವರು ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ದೇಶವನ್ನು ಸುರಕ್ಷಿತವಾಗಿ ಮನ್ನಡೆಸಿಕೊಂಡು ಹೋದ ನರೇಂದ್ರಮೋದಿರವರು 2023-24 ನೇ ಸಾಲಿನ ಬಜೆಟ್‍ನಲ್ಲಿ ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗಕ್ಕೆ ನೀರು ಒದಗಿಸುವ ಅಪ್ಪರ್‍ಭದ್ರಾ ಯೋಜನೆಗೆ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಐದು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ಬಿ.ಎನ್.ಚಂದ್ರಪ್ಪ ಹೈವೇ ಹಾಗೂ ನೀರಾವರಿ ಮಂತ್ರಿಗಳ ಪಕ್ಕದಲ್ಲಿ ಕುಳಿತುಕೊಳ್ಳಲು ಆಗದೆ ಐದು ವರ್ಷಗಳ ಕಾಲ ವಿನಾ ಕಾಲಹರಣ ಮಾಡಿದರು.
ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಟ್ಟರೆ ಮುದೋಳ, ಬಾಗಲಕೋಟೆಯಲ್ಲಿ ಯಾವ ರೀತಿ ಅಭಿವೃದ್ದಿಪಡಿಸಿದ್ದೇನೋ ಚಿತ್ರದುರ್ಗ ಜಿಲ್ಲೆಯನ್ನು ಅದೇ ರೀತಿ ಅಭಿವೃದ್ದಿಯತ್ತ ಕೊಂಡೊಯ್ಯುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಭರವಸೆ ನೀಡಿದರು.
ಬಿ.ಎಸ್.ಯಡಿಯೂರಪ್ಪ ಹಾಗೂ ಬೊಮ್ಮಾಯಿರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸಮಾಜ ಕಲ್ಯಾಣ ಇಲಾಖೆ ಹಾಗೂ ನೀರಾವರಿ ಸಚಿವನಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಬಿಜಾಪುರ ಜಿಲ್ಲೆ ಮುದೋಳ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ವಸತಿ ಶಾಲೆ ಹಾಗೂ ಹಾಸ್ಟೆಲ್‍ಗಳನ್ನು ತೆರೆದು ಬಡ ಮಕ್ಕಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದೇನೆ.
ಮೂರನೆ ಬಾರಿಗೆ ನರೇಂದ್ರಮೋದಿ ದೇಶದ ಪ್ರಧಾನಿಯಾಗಬೇಕಾಗಿರುವುದರಿಂದ ಕಾರ್ಯಕರ್ತರು ಪ್ರತಿ ಬೂತ್‍ಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ನಮ್ಮ ಸರ್ಕಾರದ ಸಾಧನೆಗಳನ್ನು ಜನತೆಗೆ ತಿಳಿಸಿ ಹೆಚ್ಚಿನ ಬಹುಮತಗಳಿಂದ ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಡಿ ಎಂದು ವಿನಂತಿಸಿದರು. ಕೇಂದ್ರ ಸರ್ಕಾರ ಅಪ್ಪರ್‍ಭದ್ರಾ ಯೋಜನೆಗೆ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಘೋಷಿಸಿದೆ.
ಇನ್ನು ರಾಜ್ಯ ಸರ್ಕಾರದ ಪಾಲೇನು ಎಂದು ಪ್ರಶ್ನಿಸಿದ ಗೋವಿಂದ ಕಾರಜೋಳರವರು ಎಲ್ಲದಕ್ಕೂ ಕೇಂದ್ರದ ಮೇಲೆ ಆಪಾದನೆ ಹೊರಿಸುವುದು ಸರಿಯಲ್ಲ. ಕೇಂದ್ರ ಮಂತ್ರಿಯಾಗಿದ್ದ ಎ.ನಾರಾಯಣಸ್ವಾಮಿ ಕೇಂದ್ರೀಯ ವಿದ್ಯಾಲಯಕ್ಕೆ ಒತ್ತು ನೀಡಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಇನ್ನು ಹೆಚ್ಚಿನ ಅಭಿವೃದ್ದಿ ಕೈಗೊಳ್ಳುವುದರ ಜೊತೆಗೆ ಚಿತ್ರದುರ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಇದರಿಂದ ವ್ಯಾಪಾರ, ವಹಿವಾಟು, ಪ್ರವಾಸೋದ್ಯಮ, ವಾಣಿಜ್ಯ ಚಟುವಟಿಕೆಗಳು ಗರಿಗೆದರಲಿದೆ ಎಂದರು.
ಕೀ ಓಟರ್ಸ್‍ಗಳು ನಿಮ್ಮ ನಿಮ್ಮ ಬೂತ್‍ಗಳಲ್ಲಿ ಮುನ್ನೂರಕ್ಕೂ ಹೆಚ್ಚು ಮತ ಹಾಕಿಸುವ ಶಕ್ತಿಯಿದೆ. ಸಮಯ ಕಡಿಮೆಯಿರುವುದರಿಂದ ಕ್ಷೇತ್ರದ ಎಲ್ಲಾ ಕಡೆ ಸುತ್ತಾಡುವುದು ಕಷ್ಟ. ಅದಕ್ಕಾಗಿ ನೀವುಗಳೇ ಅಭ್ಯರ್ಥಿ, ಪ್ರಧಾನಿಯಾಗಿ ಕೇಂದ್ರ ಸರ್ಕಾರದ ಯೋಜನೆಗಳ ಕರಪತ್ರಗಳನ್ನು ಹಂಚಿ ನನ್ನ ಗೆಲುವಿಗೆ ಕೈಜೋಡಿಸಿ ಎಂದು ವಿನಂತಿಸಿದರು.
ಕಾಂಗ್ರೆಸ್‍ನವರು ಐದು ಬಿಟ್ಟಿ ಗ್ಯಾರೆಂಟಿಗಳ ಆಸೆ ಹುಟ್ಟಿಸಿ ಮತದಾರರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯ ನಂತರೆ ಉಚಿತ ಗ್ಯಾರೆಂಟಿಗಳು ಮೂಲೆ ಗುಂಪಾಗುವುದು ಗ್ಯಾರೆಂಟಿ. ಅದಕ್ಕಾಗಿ ಕೀ ಓಟರ್ಸ್‍ಗಳು ಚುನಾವಣೆ ಮುಗಿಯುವತನಕ ನಿಮ್ಮ ನಿಮ್ಮ ಬೂತ್‍ಗಳಲ್ಲಿದ್ದುಕೊಂಡು ಕೆಲಸ ಮಾಡಿದರೆ ನನ್ನ ಗೆಲುವು ನಿಶ್ಚಿತ ಎಂದು ಹೇಳಿದರು.
ನ್ಯಾಯವಾದಿ ಸುರೇಶ್, ಇಂಜಿನಿಯರ್ ಎಂ.ಕೆ.ರವೀಂದ್ರ, ಐಶ್ವರ್ಯ ಫೋರ್ಟ್ ನ ಅರುಣ್‍ಕುಮಾರ್, ಕ್ರೀಡಾ ತರಬೇತುದಾರ ಸಾಧಿಕ್, ಅಶೋಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣಪ್ಪ, ಬಿಜೆಪಿ. ಜಿಲ್ಲಾ ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಿಷ್ಣು, ಗುರು , ಸಿದ್ದರಾಮ, ನಾಗೇಂದ್ರ, ರಾಮಚಂದ್ರ, ರಾಜಶೇಖರ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.