ಬಾಲಿವುಡ್ ಸಿನಿಮಾ ರಂಗದಲ್ಲಿ ರಾಮಾಯಣ ಸಿನಿಮಾದ ಬಜೆಟ್, ಸಂಭಾವನೆಯದ್ದೇ ಸುದ್ದಿ. ಮೂರು ಪಾರ್ಟ್ ನಲ್ಲಿ ಈ ರಾಮಾಯಣ ಸಿನಿಮಾ ಮೂಡಿ ಬರಲಿದ್ದು, ಒಟ್ಟು ಬಜೆಟ್ ಎಷ್ಟು, ಯಾರಿಗೆ ಎಷ್ಟು ಸಂಭಾವನೆ ನೀಡಲಾಗಿದೆ, ಅತೀ ಹೆಚ್ಚು ಸಂಭಾವನೆ ಪಡೆದ ನಟ ಯಾರು ಹೀಗೆ ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಅಧಿಕೃತವಾಗಿ ಚಿತ್ರತಂಡ ಹೇಳಿಕೊಳ್ಳದೇ ಇದ್ದರೂ, ನಟ, ನಟಿಯರು ಭರ್ಜರಿ ಸಂಭಾವನೆಯನ್ನೇ ಪಡೆದಿದ್ದಾರೆ.
ರಾಮನ ಪಾತ್ರದಲ್ಲಿ ಮಿಂಚಲಿರುವ ಬಾಲಿವುಡ್ ನಟ ರಣಬೀರ್ ಕಪೂರ್ ಬರೋಬ್ಬರಿ 75 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮೂರು ಪಾರ್ಟ್ ಸೇರಿ ಇವರಿಗೆ 225 ಕೋಟಿ ರೂಪಾಯಿ ಸಂದಾಯವಾಗಲಿದೆಯಂತೆ. ರಾವಣನ ಪಾತ್ರಧಾರಿ ಯಶ್ ಮೂರೂ ಪಾರ್ಟ್ ಸೇರಿ 150 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರಂತೆ. ನಟಿ ಸಾಯಿ ಪಲ್ಲವಿ 18 ಕೋಟಿ ರೂಪಾಯಿ ನೀಡಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಾವುದೂ ಖಚಿತ ಮಾಹಿತಿ ಅಲ್ಲ ಎನ್ನುವುದು ನೆನಪಿನಲ್ಲಿಡಬೇಕಾದ ಸಂಗತಿ.
ಈ ನಡುವೆ ಸಿನಿಮಾಗಾಗಿ ರಣ್‌ಬೀರ್ ಹಳ್ಳಿಯಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ರಾಮನ ಅವತಾರದಲ್ಲಿ ಬರಲು ‘ಅನಿಮಲ್’ ಹೀರೋ ಭಾರೀ ತಯಾರಿ ಮಾಡಿಕೊಳ್ತಿದ್ದಾರೆ. ‘ದಂಗಲ್’ ಸಿನಿಮಾ ನಂತರ ರಾಮಾಯಣ ಚಿತ್ರಕ್ಕಾಗಿ ಡೈರೆಕ್ಟರ್ ಹ್ಯಾಟ್ ತೊಟ್ಟಿದ್ದಾರೆ ನಿತೇಶ್ ತಿವಾರಿ. ಚಿತ್ರತಂಡ ಕೂಡ ಪಾತ್ರಕ್ಕಾಗಿ ಏನೆಲ್ಲಾ ತಯಾರಿ ಮಾಡಲು ತಿಳಿಸಿದ್ದಾರೋ ಅದನ್ನು ಪ್ರಾಮಾಣಿಕವಾಗಿ ರಣ್‌ಬೀರ್ ಕಪೂರ್ ಮಾಡುತ್ತಿದ್ದಾರೆ. ‘ಆದಿಪುರುಷ್’ ಸಿನಿಮಾದಂತೆ ತಮ್ಮ ಸಿನಿಮಾ ಆಗಬಾರದು ಎಂದು ಎಚ್ಚರಿಕೆಯಿಂದ ರಣ್‌ಬೀರ್ ಹೆಜ್ಜೆ ಇಡುತ್ತಿದ್ದಾರೆ.
ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದರೆ ಫಿಟ್ ಆಗಿರಬೇಕು. ಅಲ್ಲದೇ ಗೆಟಪ್ ಸಹ ಬದಲಾಯಿಸಿಕೊಳ್ಳಬೇಕು. ಅದಕ್ಕಾಗಿ ರಣಬೀರ್ ಕಪೂರ್ ಅವರು ತಮ್ಮ ಟ್ರೇನರ್ ಜೊತೆ ಹಳ್ಳಿಗೆ ಹೋಗಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ವಿವಿಧ ಬಗೆಯ ವ್ಯಾಯಾಮ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
ಅನಿಮಲ್’ ಚಿತ್ರದ ಸಕ್ಸಸ್ ನಂತರ ರಾಮನಾಗಿ ಬರುತ್ತಿರುವ ರಣ್‌ಬೀರ್ ಕಪೂರ್ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ. ರಾಮನಾಗಿ ಕೂಡ ಆಲಿಯಾ ಪತಿ ಗೆದ್ದು ಬೀಗುತ್ತಾರಾ? ಕಾಯಬೇಕಿದೆ.