ಮಂಗಳೂರು : ಎಲ್ಲೆಡೆ ಚುನಾವಣಾ ಕಾವು ಹೆಚ್ಚಾಗಿದ್ದು, ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ನಾನಾ ಕಸರತ್ತು ನಡೆಸುತ್ತಿದೆ. ಚುನಾವಣಾ ಆಯೋಗ ಚುನಾವಣಾ ತಯಾರಿಯ ಜೊತೆಗೆ ಮತದಾನ ಮಾಡುವ ಬಗ್ಗೆಯೂ ಜಾಗೃತಿ ಮೂಡಿಸುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಬಾಲಕಿಯೊಬ್ಬಳು ವಿಭಿನ್ನ ಪ್ರಯತ್ನದೊಂದಿಗೆ ಮತದಾನದ ಜಾಗೃತಿ ಮೂಡಿಸಿ ರಾಜ್ಯದ ಜನರ ಗಮನ ಸೆಳೆದಿದ್ದಾಳೆ. ಹೌದು. ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಶೆಕೋಡಿ ನಿವಾಸಿಯಾ ಬಾಲಕಿ ಸನ್ನಿಧಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನ ಆಗಬೇಕೆಂದು ಮತದಾನದ ಜಾಗೃತಿ ಮೂಡಿಸುತ್ತಿದ್ದಾಳೆ.
ಬಂಟ್ವಾಳದ ಮಾಣಿ ಪೆರಾಜೆಯ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಮನೆ ಮನೆಗೆ ತೆರಳಿ ಮತದಾನದ ಜಾಗೃತಿ ಮೂಡಿಸುತ್ತಿದ್ದಾರೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದು, ತನ್ನ ಮತದಾನ ಜಾಗೃತಿಗೆ ಸಹಕಾರ ನೀಡಬೇಕೆಂದು ವಿನಂತಿಸಿದ್ದಾಳೆ. ಬಾಲಕಿಯ ಪತ್ರ ಪುರಸ್ಕರಿಸಿರುವ ಚುನಾವಣಾ ಆಯೋಗ ಬಾಲಕಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಆದೇಶಿಸಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಆ ಬಾಲಕಿಯನ್ನ ಸನ್ಮಾನಿಸಿ, ಸಂಪೂರ್ಣ ಸಹಕಾರ ನೀಡಿದ್ದಾರೆ.
ಬಾಲಕಿ ಸನ್ನಿಧಿ ಪ್ರತಿದಿನ ಮನೆ ಮನೆ, ಮಾರ್ಕೆಟ್, ಹೊಟೇಲ್, ಅಂಗಡಿ, ಕಚೇರಿ, ಆಟೋ ನಿಲ್ದಾಣ ಸೇರಿದಂತೆ ಎಲ್ಲೆಡೆ ತೆರಳಿ ಮತದಾನವನ್ನು ತಪ್ಪದೇ ಮಾಡಬೇಕು ಎಂದು ಜಾಗೃತಿ ಮೂಡಿಸ್ತಿದ್ದಾಳೆ. ವಿಶೇಷ ಅಂದ್ರೆ ಕನ್ನಡ, ತುಳು, ಇಂಗ್ಲಿಷ್, ಕೊಂಕಣಿ ಹಾಗೂ ಮಲಯಾಳಂ ಸೇರಿ ಒಟ್ಟು 5 ಭಾಷೆಗಳಲ್ಲಿ ಮತದಾನದ ಜಾಗೃತಿ ನಡೆಸುತ್ತಿದ್ದಾಳೆ.
ಕೇವಲ ಜಿಲ್ಲೆ ಮಾತ್ರವಲ್ಲದೆ ಉಡುಪಿ, ಕಾರವಾರ ನೆರೆಯ ರಾಜ್ಯಗಳಾದ ಕೇರಳ, ಗೋವಾದಲ್ಲೂ ಮತದಾನ ಜಾಗೃತಿ ಮೂಡಿಸುತ್ತಿದ್ದಾಳೆ. ಯಾರಿಂದಲೂ ಸಹಾಯ ಪಡೆಯದೆ ಟ್ಯಾಕ್ಸಿ ಚಾಲಕರಾದ ತನ್ನ ತಂದೆ ಲೋಕೇಶ್ ಕಶೆಕೋಡಿಯವರ ಕಾರಿನಲ್ಲೇ ತಾಯಿ ಲೀಲಾವತಿ ಸಹೋದರಿ ಸಮೃದ್ಧಿ ಜೊತೆ ತೆರಳಿ ಈ ಕಾರ್ಯ ಮಾಡುತ್ತಿದ್ದಾಳೆ.
ಮಗಳ ಈ ಆಲೋಚನೆ ಹಾಗೂ ಸಾಹಸಕ್ಕೆ ಪೋಷಕರು ಕೂಡ ಸಾಥ್ ನೀಡಿದ್ದು, ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಒಟ್ಟಾರೆ ಮತದಾನ ದಿನದಂದು ಸಿಕ್ಕ ರಜೆಯಲ್ಲಿ ಮಜಾ ಮಾಡಲು ಹೊರಡುವವರೇ ಹೆಚ್ಚು. ತನ್ನ ಕರ್ತವ್ಯವನ್ನು ಮರೆತು ಮತದಾನಕ್ಕೆ ಚಕ್ಕರ್ ಹಾಕುವ ಮಂದಿಗೆ ಈ ಬಾಲಕಿಯ ಜಾಗೃತಿ ನಿಜಕ್ಕೂ ಶ್ಲಾಘನೀಯ.