ಹೊಳಲ್ಕೆರೆ, ಏಪ್ರಿಲ್ 12 : ದಲಿತ ವಿರೋಧಿ ಮಹಿಳೆಯರಿಗೆ ಸುರಕ್ಷತೆ ನೀಡದೆ ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಎರಡು ಲಕ್ಷಗಳಿಗೂ ಅಧಿಕ ಮತಗಳಿಂದ ಗೆಲ್ಲಿಸಿ ಎಂದು ಬಿಜೆಪಿ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತದಾರರಲ್ಲಿ ಮನವಿ ಮಾಡಿದರು.
ಪಟ್ಟಣದ ಕೊಟ್ರೆನಂಜಪ್ಪ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸಂವಿಧಾನ ಕೊಟ್ಟಂತ ಡಾ.ಬಿ.ಅಂಬೇಡ್ಕರ್‍ರವರನ್ನು ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್‍ಗೆ ಅಂಬೇಡ್ಕರ್‍ರವರ ಹೆಸರೇಳುವ ಯೋಗ್ಯತೆಯಿಲ್ಲ. ಅವರ ಅಂತ್ಯ ಸಂಸ್ಕಾರಕ್ಕೂ ಗೌರವ ಕೊಡಲಿಲ್ಲ. ರಾಜ್ಯದಲ್ಲಿ ಬಿಜೆಪಿ. ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಕಿಸಾನ್ ಸಮ್ಮಾನ್, ರೈತರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತ ವಿದ್ಯಾಸಿರಿ ಇವೆಲ್ಲಕ್ಕೂ ಕಾಂಗ್ರೆಸ್ ಕಲ್ಲು ಹಾಕಿದೆ. ರಾಜ್ಯದಲ್ಲಿ ರೈತರಿಗೆ ಬೆಳೆ ನಷ್ಟ ಬರಪರಿಹಾರ ಕೊಡದೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ದೇಶದ ಒಂಬತ್ತು ರಾಜ್ಯಗಳಲ್ಲಿ ಬರಗಾಲವಿದೆ. ಅಲ್ಲಿನ ಮುಖ್ಯಮಂತ್ರಿಗಳೆ ಖಜಾನೆಯಿಂದ ಪರಿಹಾರ ನೀಡಿದ್ದಾರೆ.
ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ನಯಾ ಪೈಸೆಯನ್ನು ಕೊಟ್ಟಿಲ್ಲ. 680 ಕೋಟಿ ರೂ.ಗಳನ್ನು ಹೈನುಗಾರಿಕೆಗೆ ಬಾಕಿ ಉಳಿಸಿಕೊಂಡಿದೆ. ಇಂತಹ ಅನಿಷ್ಟ ಸರ್ಕಾರವನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಲಿಸಬೇಕಿರುವುದರಿಂದ ಪ್ರತಿ ಬೂತ್‍ನಲ್ಲಿ ಮನೆ ಮನೆಗೆ ಹೋಗಿ ಬಿಜೆಪಿ ಯ ಸಾಧನೆಗಳನ್ನು ತಿಳಿಸಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳರವರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಿ ಎಂದು ಕಾರ್ಯಕರ್ತರಲ್ಲಿ ವಿನಂತಿಸಿದರು.
ದೇಶದ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಬಿಜೆಪಿ ಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ಗೆ ನಿದ್ದೆ ಬರುತ್ತಿಲ್ಲ. ದೇಶದ ಭವಿಷ್ಯ ರೂಪಿಸುವ ಚುನಾವಣೆ ಇದಾಗಿರುವುದರಿಂದ ಕಾರ್ಯಕರ್ತರು ಹಗಲು ರಾತ್ರಿ ಕೆಲಸ ಮಾಡಿ ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಗೆಲ್ಲಿಸಿ ಎಂದು ಕೋರಿದ ಬಿ.ವೈ.ವಿಜಯೇಂದ್ರ ಯಾವ ಮುಖವಿಟ್ಟುಕೊಂಡು ಕಾಂಗ್ರೆಸ್‍ನವರು ಜನರ ಬಳಿ ಹೋಗಿ ಓಟು ಕೇಳುತ್ತಾರೆಂದು ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರಮೋದಿರವರು ಬಡವರಿಗಾಗಿ ಕೊಟ್ಟಿರುವ ಅಕ್ಕಿಯನ್ನು ನೀಡಲು ಕಾಂಗ್ರೆಸ್‍ಗೆ ಇಷ್ಟವಿಲ್ಲ. ಸುಳ್ಳು ಭರವಸೆಗಳನ್ನು ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಬೆಲೆ ಏರಿಕೆ ಮಾಡಿದ್ದನ್ನು ಬಿಟ್ಟರೆ ಏನು ಸಾಧನೆ ಇಲ್ಲ. ಹಾಲಿನ ದರ ಹೆಚ್ಚಿಸಿದೆ. ಆದರೆ ರೈತರಿಗೆ ಲಾಭವಿಲ್ಲ. ಉಚಿತ ವಿದ್ಯುತ್ ಒಂದು ಕಡೆ ಮತ್ತೊಂದು ಕಡೆ ಒಂದು ಯೂನಿಟ್‍ಗೆ ಇಂತಿಷ್ಟು ದರ ಏರಿಕೆ. ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರೈತರು ತಮ್ಮ ಹೊಲಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಇಪ್ಪತ್ತೈದು ಸಾವಿರ ರೂ.ಗಳನ್ನು ಪಾವತಿಸಿದರೆ ಟ್ರಾನ್ಸ್‍ಫಾರ್ಮರ್ ಅಳವಡಿಸಿ ವೈರ್ ಎಳೆದು ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರದಲ್ಲಿ ರೈತರು ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಎರಡುವರೆಯಿಂದ ಮೂರು ಲಕ್ಷ ರೂ.ಗಳನ್ನು ಕಟ್ಟಬೇಕು. ಅಬಕಾರಿ ಶುಲ್ಕ ಜಾಸ್ತಿಯಾಗಿದೆ. ಬಸ್ ದರ ಏರಿಕೆ, ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ಕಸಿಯುವ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯನವರದು ಬರಿ ಮೊಸಳೆ ಕಣ್ಣೀರು ಎಂದು ಬಿ.ವೈ.ವಿಜಯೇಂದ್ರ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಹರಿಹಾಯ್ದರು.
ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳಿಗೆ ಮೀಸಲಾಗಿಟ್ಟಿದ್ದ 24 ಸಾವಿರ ಕೋಟಿ ರೂ.ಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರೆಂಟಿಗಳಿಗೆ ಬಳಿಸಿಕೊಂಡು ಎಸ್ಸಿ.ಎಸ್ಟಿ.ಗಳಿಗೆ ದ್ರೋಹವೆಸಗಿದೆ. ಇಂತಹ ಲಜ್ಜೆಗೆಟ್ಟ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕಾಗಿರುವುದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಹೇಳಿದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ ನಂಬಿದವರಿಗೆ ಮೋಸ ಮಾಡುವ ಜಾಯಮಾನ ನಮ್ಮದಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ನನ್ನ ಪುತ್ರ ಎಂ.ಸಿ.ರಘುಚಂದನ್ ಕೂಡ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಆದರೆ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮಾತಿಗೆ ಬೆಲೆ ಕೊಟ್ಟು ಸುಮ್ಮನಾಗಿದ್ದೇವೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವುದಾಗಿ ಬಿ.ವೈ.ವಿಜಯೇಂದ್ರರವರಿಗೆ ಭರವಸೆ ನೀಡಿದರು.
ಹೊಳಲ್ಕೆರೆ ಕ್ಷೇತ್ರದ ಎಲ್ಲಾ ಕೆರೆಗಳಿಗೆ ಅ.2 ರಂದು ನೀರು ತುಂಬಿಸಲಾಗುವುದು. ಅದಕ್ಕಾಗಿ ಎಲ್ಲಾ ಕೆರೆಗಳಿಗೆ ಪೈಪ್‍ಲೈನ್ ಅಳವಡಿಸಲಾಗಿದೆ. ನಾಲ್ಕು ನೂರು ಕೋಟಿ ರೂ.ಗಳಿಗೂ ಹೆಚ್ಚು ಹಣ ತಂದಿದ್ದೇನೆ. ತುಂಗಭದ್ರಾ ಹಾಗೂ ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೀರು ತಂದು ಪ್ರತಿ ಮನೆಗೆ ಶುದ್ದ ಕುಡಿಯುವ ನೀರು ಪೂರೈಸಲಾಗುವುದು. ಎಲ್ಲಾ ಹಳ್ಳಿಗಳಲ್ಲಿ ಸಿಮೆಂಟ್ ರಸ್ತೆ ಮಾಡಿಸಿದ್ದೇನೆ. ಬ್ರಿಟೀಷರ ಕಾಲದ ಶಾಲೆಗಳನ್ನು ಕೆಡವಿ ಗುಣಮಟ್ಟದ ಕಟ್ಟಡಗಳನ್ನು ಕಟ್ಟಿಸಲಾಗಿದೆ. ತಲೆ ತಗ್ಗಿಸಿ ಎಂದಿಗೂ ರಾಜಕಾರಣ ಮಾಡಿದವನಲ್ಲ. ಬಿ.ವೈ.ವಿಜಯೇಂದ್ರರವರು ಮುಂದೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆಂಬ ವಿಶ್ವಾಸವಿದೆ ಎಂದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ ಇದೆ ತಿಂಗಳ 26 ರಂದು ನಡೆಯುವ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ನರೇಂದ್ರಮೋದಿರವರ ಕೈಬಲಪಡಿಸಿ ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡಿ ಎಂದು ಕಾರ್ಯಕರ್ತರಲ್ಲಿ ಭಿನ್ನವಿಸಿಕೊಂಡರು.
ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ ಪ್ರಧಾನಿ ನರೇಂದ್ರಮೋದಿ ಯಾವುದೇ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿಲ್ಲ. ಭ್ರಷ್ಠಾಚಾರದ ಆಪಾದನೆಯಿಲ್ಲ. ಜಗತ್ತಿನ ಎಲ್ಲಾ ದೇಶಗಳು ಭಾರತದ ಸ್ನೇಹ ಬಯಸುವ ರೀತಿಯಲ್ಲಿ ಅಧಿಕಾರ ನಡೆಸಿದ್ದಾರೆ. ಬಿಜೆಪಿ. ಸಾಧನೆಯನ್ನು ಮುಂದಿಟ್ಟುಕೊಂಡು ಬೂತ್ ಮಟ್ಟದಲ್ಲಿ ಮನೆ ಮನೆಗೆ ಹೋಗಿ ಧೈರ್ಯದಿಂದ ಮತ ಕೇಳಿ. ಮತಗಟ್ಟೆಗೆ ಮತದಾರರನ್ನು ಕರೆ ತಂದು ಮತ ಹಾಕಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ನಾಲ್ಕು ನೂರಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬೇಕಿದೆ. ಕಾಂಗ್ರೆಸ್‍ನಲ್ಲಿ ಪ್ರಧಾನಿಯಾಗುವ ಅರ್ಹತೆ ಯಾರಿಗೂ ಇಲ್ಲ. ದೇಶದ 140 ಕೋಟಿ ಜನ ಮೋದಿಗಾಗಿ ಹಂಬಲಿಸುತ್ತಿದ್ದಾರೆಂದರು.
ಯುವ ಮುಖಂಡ ಎಂ.ಸಿ.ರಘುಚಂದನ್ ಮಾತನಾಡಿ ನಾನು ಕೂಡ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದೆ. ಆದರೆ ಟಿಕೇಟ್ ಸಿಗಲಿಲ್ಲ. ಪಕ್ಷದ ಹಿರಿಯರ ಮಾತಿಗೆ ನನ್ನ ತಂದೆಯವರು ಗೌರವ ಕೊಟ್ಟಿದ್ದರಿಂದ ಗೋವಿಂದ ಕಾರಜೋಳರವರಿಗೆ ಬೆಂಬಲಿಸಲು ತೀರ್ಮಾನಿಸಿದೆವು. ಅದರಂತೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆಂದು ಹೇಳಿದರು.
ಬೇರೆ ಬೇರೆ ಪಕ್ಷಗಳಿಂದ ನನಗೆ ಆಹ್ವಾನ ಬಂದಿತ್ತು. ಕಾರ್ಯಕರ್ತರ ಕತ್ತು ಕೊಯ್ದು ಹೋಗುವುದು ಸರಿಯಲ್ಲ. ನಂಬಿಕೆ ಉಳಿಸಿಕೊಂಡಿದ್ದೇನೆ. ಕೊಟ್ಟ ಮಾತಿನಿಂದ ಹಿಂದೆ ಸರಿಯಲ್ಲ. ಈ ಭಾಗದಲ್ಲಿ ಬಿಜೆಪಿ. ಅರಳಬೇಕು. ಗೋವಿಂದ ಕಾರಜೋಳರವರನ್ನು ಎಲ್ಲರೂ ಸೇರಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿಕೊಳ್ಳೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ವಿಧಾನಪರಿಷತ್ ಸದಸ್ಯರುಗಳಾದ ರವಿಕುಮಾರ್, ಕೆ.ಎಸ್.ನವೀನ್, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಹೊಳಲ್ಕೆರೆ ಮಂಡಲ ಅಧ್ಯಕ್ಷ ಎಂ.ಬಿ.ಸಿದ್ದೇಶ್, ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್, ಜೆಡಿಎಸ್.ಜಿಲ್ಲಾಧ್ಯಕ್ಷ ಜಯಣ್ಣ, ಲೋಕಸಭಾ ಚುನಾವಣೆ ಸಂಚಾಲಕ ಲಿಂಗಮೂರ್ತಿ, ಬಿಜೆಪಿ ಮತ್ತು ಜೆಡಿಎಸ್.ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.