ಚಿತ್ರದುರ್ಗ, ಏಪ್ರಿಲ್.12 : ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಬುದ್ದಿವಂತನಾಗಿದ್ದರೆ ಇಲ್ಲಿಗೆ ಬಂದು ಸ್ಪರ್ಧಿಸುತ್ತಿರಲಿಲ್ಲ. ನಾವು ಗೆಲ್ಲುವ ಕಡೆ ಏಕೆ ಬಂದು ತೊಂದರೆ ಕೊಡುತ್ತೀಯ ಎಂದು ಗುಪ್ತವಾಗಿ ಹೇಳಿದ್ದೆ. ಕೇಳಲಿಲ್ಲ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ತಮ್ಮ ವೇದನೆಯನ್ನು ಹೊರ ಹಾಕಿದರು.
ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಬೆಂಬಲಿಸಿ ಎನ್.ಬಿ.ಟಿ.ಹಾಲ್‍ನಲ್ಲಿ ಶುಕ್ರವಾರ ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಗೋವಿಂದ ಕಾರಜೋಳರವರು ನಮ್ಮವರೆ ಮಾದಿಗ ಸಮುದಾಯದವರು.ಆದರೂ ತಪ್ಪುಹೆಜ್ಜೆ ಇಟ್ಟಿದ್ದಾರೆ.
ರಾಜ್ಯದ 28 ಕ್ಷೇತ್ರಗಳಲ್ಲಿ ಬೇರೆ ಎಲ್ಲಿಯಾದರೂ ಹೋಗಿ ಸ್ಪರ್ಧಿಸಬಹುದಿತ್ತು. ಧರ್ಮ ಅಧರ್ಮದ ನಡುವೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಧರ್ಮದ ಪರವಾಗಿರುವ ಸರಳ ಸಂಪನ್ನ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸುವಂತೆ ಮಾದಿಗ ಸಮುದಾಯದವರಲ್ಲಿ ಕೆ.ಹೆಚ್.ಮುನಿಯಪ್ಪ ಮನವಿ ಮಾಡಿದರು.
ರಾಜ್ಯದಲ್ಲಿ ಕೋಲಾರ ಮತ್ತು ಚಿತ್ರದುರ್ಗ ಎರಡು ಕಡೆ ಸೀಟು ತರಬೇಕಾದರೆ ಸಾಕಷ್ಟು ಹೋರಾಟ ನಡೆಸಬೇಕಾಯಿತು. ಸೀಟು ತಪ್ಪಿಸುವ ಹುನ್ನಾರವು ನಡೆಯಿತು. ಎಲ್ಲವನ್ನು ಮೀರಿ ದೊಡ್ಡ ಸಂಖ್ಯೆಯ ಜನಾಂಗಕ್ಕೆ ಅನ್ಯಾಯ ಮಾಡಬಾರದೆಂದು ಎ.ಐ.ಸಿ.ಸಿ. ಅಧಿನಾಯಕಿ ಸೋನಿಯಾಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆರವರು ಮಾದಿಗ ಸಮುದಾಯಕ್ಕೆ ಟಿಕೇಟ್ ನೀಡಿ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಬುದ್ದ, ಬಸವ, ಅಂಬೇಡ್ಕರ್, ಗಾಂಧಿ ಚಿಂತನೆಯುಳ್ಳ ಕಾಂಗ್ರೆಸ್ ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನ ಉಳಿಯುತ್ತದೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳು ಐದು ಉಚಿತ ಗ್ಯಾರೆಂಟಿಗಳನ್ನು ನೀಡಿದ್ದಾರೆ. ಎಲ್ಲಾ ವರ್ಗದವರನ್ನು ಹಸಿವುಮುಕ್ತವನ್ನಾಗಿಸಿ ಆಹಾರ ಭದ್ರತೆ ಕಾಯಿದೆ ಜಾರಿಗೆ ತಂದಿದ್ದು, ನಮ್ಮ ಪಕ್ಷ. ಒಂದು ಕೋಟಿ ಇಪ್ಪತ್ತೆಂಟು ಲಕ್ಷ ಕುಟುಂಬಗಳಿಗೆ ನಾಲ್ಕುವರೆ ಕೋಟಿ ಜನಕ್ಕೆ ನೂರ ಎಪ್ಪತ್ತು ರೂ.ಗಳು ಸಿಕ್ಕಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಶಕ್ತಿ ಯೋಜನೆ ಈ ಬಾರಿಯ ಚುನಾವಣೆಯಲ್ಲಿ ಪಕ್ಷಕ್ಕೆ ವರದಾನವಾಗಲಿದೆ. ಕಾಂಗ್ರೆಸ್ ಕಾರ್ಯಕ್ರಮಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಬಹುಮತಗಳಿಂದ ಗೆಲ್ಲಿಸುವಂತೆ ಕೆ.ಹೆಚ್.ಮುನಿಯಪ್ಪ ಮಾದಿಗ ಸಮುದಾಯದವರಲ್ಲಿ ಕೋರಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವರಿಷ್ಟರು ಕೋಲಾರ ಹಾಗೂ ಚಿತ್ರದುರ್ಗ ಮೀಸಲು ಕ್ಷೇತ್ರಗಳಲ್ಲಿ ಮಾದಿಗರಿಗೆ ಟಿಕೇಟ್ ನೀಡಿ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನನಗೂ ಸ್ಪರ್ಧಿಸುವಂತೆ ಕೇಳಿದರು. ರಾಷ್ಟ್ರ ರಾಜಕಾರಣ ಇಷ್ಟವಿಲ್ಲದ ಕಾರಣ ಬಿ.ಎನ್.ಚಂದ್ರಪ್ಪನವರನ್ನೆ ಸ್ಪರ್ಧಿಸುವಂತೆ ಹೇಳಿದೆ. ಅನೇಕ ಆಕಾಂಕ್ಷಿಗಳಿದ್ದರೂ ಬಿ.ಎನ್.ಚಂದ್ರಪ್ಪನವರನ್ನು ಅಭ್ಯರ್ಥಿಯನ್ನಾಗಿ ಪಕ್ಷ ಘೋಷಿಸಿದೆ.
ಮಾದಿಗ ಸಮುದಾಯ ಒಗ್ಗಟ್ಟಾಗಿ ಗೆಲ್ಲಿಸಿ ರಾಜಕೀಯವಾಗಿ ಶಕ್ತಿ ತುಂಬುವ ಕೆಲಸ ಮಾಡಬೇಕೆಂದು ಮಾದಿಗ ಜನಾಂಗದವರನ್ನು ತಾಕೀತು ಮಾಡಿದರು. ಕೋಮುವಾದಿ ಬಿಜೆಪಿ. ನಮ್ಮವರಿಗೆ ಒಬ್ಬರಿಗೂ ಅವಕಾಶ ಕೊಟ್ಟಿಲ್ಲ. ಮಾದಿಗರು, ಅಹಿಂದ ವರ್ಗದವರು ಒಂದಾಗಿ ಮತ ಚಲಾಯಿಸಿದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಯಿತು. ಯಾವುದೇ ಒಬ್ಬ ನಾಯಕ ಎಲ್ಲರೂ ಮೆಚ್ಚುವಂತಿರಬೇಕು. ಸರಳ, ಸಂಪನ್ನ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಎಸ್.ಸಿ.ಪಿ. ಟಿ.ಎಸ್.ಪಿ. ಕಾಯಿದೆಯನ್ನು ಜಾರಿಗೊಳಿಸಿದೆ. 36 ಸಾವಿರ ಕೋಟಿ ರೂ.ಗಳಿದೆ. ಆದಿಜಾಂಬವ ನಮ್ಮ ಸಮುದಾಯಕ್ಕೆ ಬಳಕೆಯಾಗಬೇಕು. ಬೇರೆ ಕಾಮಗಾರಿಗೆ ಬಳಸಬಾರದು. ದುರ್ಬಲ ಮಾದಿಗ ಸಮಾಜ ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಬೇಕಾಗಿರುವುದರಿಂದ ಮಾದಿಗ ಜನಾಂಗ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ತಿಳಿಸಿದರು.
ಸಂವಿಧಾನ ಬದಲಾವಣೆ ಮಾಡಲು ಹೊರಟಿರುವ ಬಿಜೆಪಿ.ಯಲ್ಲಿಯೂ ಮಾದಿಗ ಸಮುದಾಯದ ಶಾಸಕರು, ಮಂತ್ರಿಗಳಿದ್ದಾರೆ. ನಮ್ಮ ಸಮುದಾಯಕ್ಕೆ ನಿಜವಾಗಿಯೂ ನಾಚಿಕೆಯಾಗಬೇಕು. ಯಾರೆ ಅಭ್ಯರ್ಥಿಗಳಾಗಿ ಇಲ್ಲಿಗೆ ಬರಲಿ ಅವರ ಹಿಂದೆ ಮಾದಿಗ ಜನಾಂಗ ಹೋಗುತ್ತಿದೆ. ಪ್ರಜಾಪ್ರಭುತ್ವ ಸಂವಿಧಾನ ಉಳಿಯಬೇಕಾಗಿದೆ. ನಮ್ಮ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲೇಬೇಕು. ಜಾತ್ಯತೀತ ಪಕ್ಷ ಜೆಡಿಎಸ್. ಬಿಜೆಪಿ. ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಮಾದಿಗರೆಲ್ಲಾ ಒಂದಾಗಿ ಬಿಜೆಪಿ.ಯನ್ನು ಮಣಿಸಬೇಕು. ರಾಜ್ಯದಲ್ಲಿ ಅರವತ್ತರಿಂದ ಎಪ್ಪತ್ತು ಲಕ್ಷ ಮಾದಿಗರಿದ್ದೇವೆ. ಡಿ.ಸುಧಾರಕರ್‍ರವರನ್ನು ಮಾದಿಗರು ಮಂತ್ರಿಯನ್ನಾಗಿ ಮಾಡಿದ್ದಾರೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮಾದಿಗ ಮತದಾರರಿದ್ದಾರೆ. ಮನುವಾದಿಗಳ ಕೈಗೆ ಅಧಿಕಾರ ಕೊಡಬಾರದೆಂದರೆ ಕಾಂಗ್ರೆಸ್‍ನ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಬೇಕಿದೆ ಎಂದು ವಿನಂತಿಸಿದರು.
ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡುತ್ತ ಸಂವಿಧಾನ ಉಳಿಸುವ ಚುನಾವಣೆ ಇದಾಗಿರುವುದರಿಂದ ಮಾದಿಗ ಸಮುದಾಯ ಎಚ್ಚರಿಕೆಯಿಂದ ಮತ ಚಲಾಯಿಸಬೇಕಿದೆ. ಮನುವಾದಿಗಳು, ಭೀಮವಾದಿಗಳ ನಡುವಿನ ಚುನಾವಣೆಯಲ್ಲಿ ಗೆಲುವು ನಮ್ಮದಾಗಬೇಕು. ಮುದೋಳ, ಬಾಗಲಕೋಟೆಯಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದೇನೆಂದು ಹೇಳಿಕೊಳ್ಳುತ್ತಿರುವ ಗೋವಿಂದ ಕಾರಜೋಳ ಏಕೆ ಸೋತರು ಎಂದು ಪ್ರಶ್ನಿಸಿದ ಬಿ.ಎನ್.ಚಂದ್ರಪ್ಪ ಬಿಜೆಪಿ.ಯ ಪೊಳ್ಳು ಭರವಸೆಗಳು ಇಲ್ಲಿ ನಡೆಯಲ್ಲ. ಬಹುಮತಗಳಿಂದ ಗೆಲ್ಲಿಸಿ ನನ್ನನ್ನು ಪಾರ್ಲಿಮೆಂಟ್‍ಗೆ ಕಳಿಸಿಕೊಡಿ ಎಂದು ಮಾದಿಗ ಸಮುದಾಯದವರಲ್ಲಿ ಕೇಳಿಕೊಂಡರು. ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್ ಇನ್ನು ಅನೇಕರು ಮಾತನಾಡಿದರು.
ಮಾದಿಗ ಸಮಾಜದ ಮುಖಂಡರುಗಳಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೋಪಾಲಕೃಷ್ಣ, ಆರ್.ನರಸಿಂಹರಾಜ, ಡಿ.ಎನ್.ಮೈಲಾರಪ್ಪ, ಜಿ.ಎಲ್.ಮೂರ್ತಿ, ಪಾಂಡುರಂಗಸ್ವಾಮಿ, ವೀರಭದ್ರಪ್ಪ, ರಂಗ್ವಾಮಿ, ಮಲ್ಲೇಶಪ್ಪ, ತಿಪ್ಪಮ್ಮ, ಗೀತಮ್ಮ, ಸುಜಾತಮ್ಮ, ಎಂ.ಡಿ.ರವಿ, ಬಿ.ಪಿ.ತಿಪ್ಪೇಸ್ವಾಮಿ, ಹರೀಶ್, ಕೊಟ್ಟ ಶಂಕರ್, ಜಯಣ್ಣ, ಕೆ.ಕುಮಾರ್, ಬಿ.ಪಿ.ಪ್ರಕಾಶ್ ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಇನ್ನು ಅನೇಕರು ವೇದಿಕೆಯಲ್ಲಿದ್ದರು. ಮಾದಿಗ ಸಮಾಜದ ಎಸ್.ಜಗದೀಶ್, ಕೆ.ರಾಜಣ್ಣ, ಮಲ್ಲೇಶ್ ಇನ್ನು ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.