ಶಿವಮೊಗ್ಗ : ನಿರಂತರ ಪರಿಶ್ರಮ ಅಭ್ಯಾಸ ಮಾಡುವುದು, ಛಲ ಏಕಾಗ್ರತೆಯಿಂದ ನಮ್ಮ ಕೆಲಸವನ್ನು ಮುಂದುವರಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕೆಂದು ಗಾಯಕ ಭದ್ರಾವತಿ ವಾಸು ಅಭಿಪ್ರಾಯಪಟ್ಟರು.
ವಿನೋಬಾ ನಗರದ ವಿಧಾತ್ರಿ ಸವಾಂಗಣದಲ್ಲಿ ಆಯೋಜಿಸಿದ್ದ ಜೇನುಗೂಡ ಸಿಂಗರ್ಸ್ ಗ್ರೂಪ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಮಕ್ಕಳು ಕಡಿಮೆ ಅವಧಿಯಲ್ಲಿ ಕಾಲಾವಿದರಾಗಬೇಕು ಪ್ರಖ್ಯಾತಿಗಳಿಸಬೇಕು ಎನ್ನುವ ಮನೋಭಾವ ಹೊಂದಿರುತ್ತಾರೆ. ರಿಯಾಲಿಟಿ ಶೋಗಳ ಬೆನ್ನು ಬಿದ್ದಿದ್ದಾರೆ. ಒಳ್ಳೆಯ ಗುರುಗಳಲ್ಲಿ ಅಭ್ಯಾಸ ಮಾಡಿದರೆ, ಶ್ರದ್ಧೆಯಿಂದ ಕಲಿತರೆ, ಸಂಗೀತ ಒಲಿಯುತ್ತದೆ. ಮನುಷ್ಯನ ಮನಸ್ಸನ್ನು ವಿಕಾಸ ಗೊಳಿಸುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರಿ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ಸಂಗೀತ ಸಾಧಕನ ಸ್ವತ್ತು. ಸಂಗೀತದಿಂದ ಖಿನ್ನತೆ ದೂರವಾಗದೆ. ಸದಾ ಲವಲವಿಕೆಯಿಂದ ಮತ್ತು ಸಂತೋಷದಿಂದ ಇರುವಂತೆ ಮಾಡುತ್ತದೆ. ಬಾಲ್ಯದಿಂದಲೇ ಮಕ್ಕಳಿಗೆ ಸಂಗೀತ ಆಸಕ್ತಿ ಬೆಳೆಸಬೇಕು. ಆದ್ದರಿಂದ ಉತ್ತಮ ಸಂಸ್ಕಾರ ಸಿಗುತ್ತದೆ ಎಂದು ಹೇಳಿದರು. ಜೇನುಗೂಡು ಸಿಂಗರ್ಸ್ ಗ್ರೂಪ್ ಗೌರವಾಧ್ಯಕ್ಷ ವಿರೂಪಾಕ್ಷಪ್ಪ ಎಸ್ ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಉತ್ತಮ ಕೆಲಸ. ಉದಯೋನಖ ಕಲಾವಿದರು ಆಸಕ್ತಿಯಿಂದ ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸಮಾನ ವಯಸ್ಕರ ವೇದಿಕೆಯಿಂದ ಹೊಸ ಪ್ರತಿಭೆಗಳು ಹೊರಬರಬೇಕು ಎಂಬುದು ನಮ್ಮ ಆಶಯ.
ಇದೇ ಸಂದರ್ಭದಲ್ಲಿ ಗಾಯಕ ಭದ್ರಾವತಿ ವಾಸು ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಶಿವರಾಜ್ ಅವರು ಎಲ್ಲರನ್ನು ಅಭಿನಂದಿಸಿ ಗೌರವಿಸಿದರು. ವೇದಿಕೆಯಲ್ಲಿ ಕಲಾವಿದರು ಭಾವಗೀತೆ, ಚಿತ್ರಗೀತೆ, ಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದರು. ಗಾಯಕಿ ಕುಮಾರಿ ಆದ್ಯ, ಅಧ್ಯಕ್ಷ ಸಂಜಯ್, ಶೋಭಾ, ಖಜಾಂಚಿ ಆಶಾ ಹಿರೇಮಠ, ಉಪಾಧ್ಯಕ್ಷ ಸರ್ವೇಶ್ವರ್ ಎಸ್ ಹಾಗೂ ಕಲಾವಿದರು, ಸದಸ್ಯರು ಉಪಸ್ಥಿತರಿದ್ದರು.