ಬೆಂಗಳೂರು, ಏ.13 : ಲೋಕಸಭಾ ಚುನಾವಣೆ ಹಿನ್ನಲೆ ಯಾವುದೇ ಅಕ್ರಮ ನಡೆಯದಂತೆ ಚೆಕ್ಪೋಸ್ಟ್ ನಿರ್ಮಿಸಿ ಹದ್ದಿನ ಕಣ್ಣು ಇಡಲಾಗಿದೆ. ಅದರಂತೆ ಇಂದು(ಏ.13) ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಜಯನಗರದಲ್ಲಿ ಎರಡು ಕಾರು ಒಂದು ಬೈಕ್ನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಬೈಕ್ನಲ್ಲಿ ಒಂದು ಬ್ಯಾಗ್, ಎರಡು ಕಾರ್ನಲ್ಲಿ ತಲಾ ಒಂದೊಂದು ಬ್ಯಾಗ್ನ್ನು ಜಪ್ತಿ ಮಾಡಲಾಗಿದ್ದು, ಫಾರ್ಚುನರ್ ಕಾರಿನಲ್ಲಿದ್ದ ಐವರು ಎಸ್ಕೇಪ್ ಆಗಿದ್ದಾರೆ. ಇನ್ನು ಹಣ ಎಣಿಸಲು ಸಾಧ್ಯವಾಗದೆ ಬ್ಯಾಗ್ನ್ನು ಚುನಾವಣಾ ಅಧಿಕಾರಿಗಳು ಪೊಲೀಸ್ ಠಾಣೆಗೆ ತಂದಿದ್ದಾರೆ.
ಇದೇ ವೇಳೆ ಕಾರಿನ ಒಳಗಡೆ ಇದ್ದ ದಾಖಲಾತಿಗಳನ್ನ ಚುನಾವಣಾಧಿಕಾರಗಳು ವಶಕ್ಕೆ ಪಡೆದಿದ್ದಾರೆ. ಕಾರಿನ ಒಳಗಡೆ ಇದ್ದ ಒಂದು ಮೊಬೈಲ್ ಮತ್ತುಒಂದಷ್ಟು ದಾಖಲಾತಿಗಳು ಚುನಾವಣಾಧಿಕಾರಿಗಳಿಗೆ ಲಭ್ಯವಾಗಿದ್ದು, ಸೋಮಶೇಖರ್ ಗಂಗಾಧರಯ್ಯ ಎಂಬುವರ ಹೆಸರಲ್ಲಿ ಕೆಲವು ದಾಖಲೆಗಳು ಇರುವುದನ್ನು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ತನಿಖೆ ಬಳಿಕ ನಿಖರ ಮಾಹಿತಿ ದೊರೆಯಲಿದೆ.
ಈ ಘಟನೆ ಕುರಿತು ಬೆಂಗಳೂರಿನಲ್ಲಿ ಚುನಾವಣಾಧಿಕಾರಿ ಮುನೀಶ್ ಮೌದ್ಗಿಲ್ ಮಾತನಾಡಿ, ‘ಇಂದು ಬೆಳಗ್ಗೆ ಹಣ ಸಾಗಿಸುತ್ತಿದ್ದ ಬಗ್ಗೆ ನಮಗೆ ಒಂದು ಕರೆ ಬಂದಿತ್ತು. ಚುನಾವಣಾ ಅಧಿಕಾರಿ ವಿನೋದಪ್ರಿಯಾ ಸ್ಥಳಕ್ಕೆ ಭೇಟಿ ನೀಡಿದ್ದರು. ನಮ್ಮ ಅಧಿಕಾರಿಗಳ ಜೊತೆ ನಾನು ಸ್ಥಳಕ್ಕೆ ತಕ್ಷಣ ಭೇಟಿ ನೀಡಿದ್ದೆ. ಸ್ಕೂಟರ್ನಿಂದ ಫಾರ್ಚೂನರ್ ಕಾರಿಗೆ ಹಣ ಶಿಫ್ಟ್ ಮಾಡುತ್ತಿದ್ದರು. ಈ ವೇಳೆ ವಿನೋದಪ್ರಿಯಾ ಒಬ್ಬರೇ ಇದ್ದು ಅವರನ್ನೂ ಪ್ರಶ್ನಿಸಿದ್ದಾರೆ.
ತಕ್ಷಣ ದ್ವಿಚಕ್ರ ವಾಹನದಲ್ಲಿದ್ದ ಒಂದು ಬ್ಯಾಗ್ನ್ನು ವಶಕ್ಕೆ ಪಡೆದರು. ಹಣದ ಕೌಂಟಿಂಗ್ ನಡೆಯುತ್ತಿದೆ. 1 ಕೋಟಿಗೂ ಹೆಚ್ಚು ಹಣ ಇದೆ. ಪರಾರಿಯಾದ ಫಾರ್ಚೂನರ್ ಕಾರಿನ ನಂಬರ್ ಬರೆದುಕೊಂಡಿದ್ದಾರೆ. ಕಾರು ಯಾರಿಗೆ ಸೇರಿದ್ದು ಎಂದು ಪೊಲೀಸರು ಪರಿಶೀಲನೆ ನಡೆಸುತ್ತಾರೆ ಎಂದರು.