ತೆಲುಗಿನ ಖ್ಯಾತ ನಟ ಸಯಾಜಿ ಶಿಂಧೆ ಅವರು ಏಕಾಏಕಿ ಆಸ್ಪತ್ರೆ ಸೇರಿದ್ದಾರೆ. ತೀವ್ರವಾಗಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆ ಸೇರಬೇಕಾದ ಅನಿವಾರ್ಯತೆ ಬಂದಿದೆ. ಕಳೆದ ಕೆಲವು ದಿನಗಳಿಂದ ಅವರಿಗೆ ಅನಾರೋಗ್ಯ ಕಾಡಿತ್ತು. ಏಪ್ರಿಲ್ 11 ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಾಗಿದ್ದು, ಅವರ ಹೃದಯದಲ್ಲಿ ಬ್ಲಾಕೇಜ್ ಇದೆ ಎನ್ನುವ ವಿಚಾರ ಗೊತ್ತಾಗಿದೆ. ಈಗ ವೈದ್ಯರು ಆ್ಯಂಜಿಯೋಪ್ಲಾಸ್ಟಿ ಮಾಡಿದ್ದು, ಸಯಾಜಿ ಆರೋಗ್ಯವಾಗಿದ್ದಾರೆ.
ಸಯಾಜಿ ಆಸ್ಪತ್ರೆಗೆ ದಾಖಲಾದ ವಿಚಾರ ಕೇಳಿ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ವಿಡಿಯೋ ಒಂದನ್ನು ಮಾಡಿ ಪೋಸ್ಟ್ ಮಾಡಿದ್ದರು. ‘ನಾನು ಆರೋಗ್ಯವಾಗಿದ್ದೇನೆ. ನನ್ನ ಬಗ್ಗೆ ಕಾಳಜಿವಹಿಸುವ ಎಲ್ಲಾ ಅಭಿಮಾನಿಗಳು ಚಿಂತಿಸೋದು ಬೇಡ. ನಾನು ಶೀಘ್ರವೇ ನಿಮ್ಮನ್ನು ಮನರಂಜಿಸುತ್ತೇನೆ’ ಎಂದಿದ್ದಾರೆ ಸಯಾಜಿ. ‘ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಅವರು ಬೇಗ ರಿಕವರಿ ಆಗಲಿ ಎಂದು ಹಾರೈಸಿದ್ದಾರೆ.
ಇತ್ತೀಚೆಗೆ ಸಯಾಜಿ ಅವರಿಗೆ ಅನಾರೋಗ್ಯ ಕಾಡಿತ್ತು. ಈಗ ಅವರಿಗೆ ಎದೆನೋವು ಕೂಡ ಕಾಣಿಸಿಕೊಂಡಿರುವುದರಿಂದ ಕುಟುಂಬದವರು ಆತಂಕಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಹೃದಯಕ್ಕೆ ಸಂಬಂಧಿಸಿದ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದೆ. ಅವರ ಹೃದಯ ರಕ್ತನಾಳದಲ್ಲಿ ಶೇ.99 ಬ್ಲಾಕೇಜ್ ಇರುವ ವಿಚಾರ ಗೊತ್ತಾಗಿದೆ. ಸದ್ಯ ಅವರ ಆರೋಗ್ಯ ಸುಧಾರಿಸಿದೆ. ಅವರನ್ನು ಎರಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
ಸಯಾಜಿ ಶಿಂದೆ ಅವರು ‘ಸಿಂಗಂ’, ‘ನೆನೊಕ್ಕಡಿನೆ’, ‘ಅಂತಿಮ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ‘ಕಿಲ್ಲರ್ ಸೂಪ್’ ಸೀರಿಸ್ನಲ್ಲಿ ಮನೋಜ್ ಬಾಜ್ಪಾಯೀ, ಕೊಂಕಣ್ ಸೇನ್ ಶರ್ಮಾ ಮೊದಲಾದವರು ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಖ್ಯಾತ ನಟ ಅಮಿತಾಭ್ ಬಚ್ಚನ್ ಕೂಡ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು. ಸಾಮಾನ್ಯವಾಗಿ ಹೃದಯಾಘಾತವಾದಾಗ ಹೃದಯಕ್ಕೆ ರಕ್ತ ಪೂರೈಕೆ ಮಾಡುವ ಅಪಧಮನಿಗಳು ಬ್ಲಾಕ್ ಆಗಿದ್ದರೆ ಅವುಗಳನ್ನು ತೆರೆಯಲು ಆಂಜಿಯೋಪ್ಲಾಸ್ಟಿ ಮಾಡಲಾಗುತ್ತದೆ. ಇದರರ್ಥ ಹೃದಯದ ಅಪಧಮನಿಯ ಅಡಚಣೆಯಿಂದಾಗಿ ರಕ್ತ ಪರಿಚಲನೆ ಸರಿಯಾಗಿ ನಡೆಯುತ್ತಿಲ್ಲ. ಇಂತಹ ಸಮಯದಲ್ಲಿ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ.