ಪಶ್ಚಿಮ ಬಂಗಾಳದಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರನ್ನ ಬೆಂಗಳೂರಿಗೆ ಕರೆತರಲಾಗಿದೆ. ಕೋಲ್ಕತ್ತಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಶಂಕಿತರಾದ ಅಬ್ದುಲ್ ಮತೀನ್ ತಾಹ, ಮುಸಾವಿರ್ ಹುಸೇನ್‌ನನ್ನು ಎನ್‌ಐಎ ಪೊಲೀಸರು ಕರೆತಂದ್ದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ನಡುವೆ ಶಂಕಿತ ಉಗ್ರ ತೀರ್ಥಹಳ್ಳಿಯ ಮುಸಾವೀರ್ ಲಾಡ್ಜ್‌ಗಳಲ್ಲಿ ತಂಗೋದಕ್ಕೆ ಕಲಬುರಗಿ ನಗರದ ಯುವಕನೊಬ್ಬನ ಆಧಾರ್ ಕಾರ್ಡ್ ಅನ್ನು ನಕಲು ಮಾಡಿ ಬಳಸಿದ್ದಾನೆ ಅನ್ನೋ ಸಂಗತಿ ಬೆಳಕಿಗೆ ಬಂದಿದೆ.
ಹೌದು. ಮುಸಾವಿರ್ ಸಾಜೀದ್ ಹುಸೇನ್ ಕಲಬುರಗಿಯ ವರ್ಧನನಗರ ಬಡಾವಣೆಯ ಅನ್‌ಮೋಲ್ ಎಂಬ ಯುವಕನ ಆಧಾರ ಕಾರ್ಡ್ ಫೇಕ್ ಮಾಡಿಕೊಂಡು, ಈ ಕಾರ್ಡ್ ಬಳಸಿ ವಿವಿಧ ಲಾಡ್ಜ್‌ಗಳಲ್ಲಿ ವಾಸ್ತವ್ಯ ಮಾಡುತ್ತಿದ್ದ. ಎನ್‌ಐಎ ತಂಡ ಆಧಾರ್ ಕಾರ್ಡ್‌ನಲ್ಲಿದ್ದ ವಿಳಾಸವನ್ನು ಪರಿಶೀಲಿಸಿದ ಬಳಿಕವೇ ಅದು ಫೇಕ್ ಎಂದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ಬಾಂಬ್ ಬ್ಲಾಸ್ಟ್ ಕೇಸಲ್ಲಿ ಬಂಧಿತರಾಗಿರುವ ಮುಜಾಮಿಲ್ ಶರೀಫ್, ಮಾಜ್ ಮಾನಿರ್ ಹೇಳಿಕೆ ಅಧರಿಸಿ ವಿಚಾರಣೆ ನಡೆಸಲಾಗುವುದು. ರಾಮೇಶ್ವರಂ ಬಾಂಬ್ ಸ್ಫೋಟ ಕೇಸಲ್ಲಿ ಯರ‍್ಯಾರ ಪಾತ್ರ ಏನಿತ್ತು? ಈ ಕೃತ್ಯದ ಹಿಂದೆ ಬೇರೆ ಯಾರೆಲ್ಲಾ ಇದ್ದಾರೆ? ರಾಮೇಶ್ವರಂ ಕೆಫೆಯಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ ಉದ್ದೇಶವೇನು? ಬೇರೆ ಎಲ್ಲೆಲ್ಲಿ ವಿಧ್ವಂಸಕ ಕೃತ್ಯವೆಸಗಲು ಪ್ಲಾನ್ ಮಾಡಲಾಗಿತ್ತು ಎಂಬ ಅಂಶಗಳು ಸೇರಿದಂತೆ ನಾನಾ ದೃಷ್ಟಿಕೋನದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಗೆ ಎನ್‌ಐಎ ವಿಶೇಷ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಅಧಿಕಾರಿಗಳು ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ. ಭದ್ರತಾ ದೃಷ್ಟಿಯಿಂದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಿರುವ ಅಧಿಕಾರಿಗಳು, 14 ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲು ತಯಾರಿ ನಡೆಸಿದ್ದಾರೆ.