ಪ್ರತಿಭಾವಂತ ನಟ ಸೂರ್ಯ ಅವರು ಈಗ ‘ಕಂಗುವ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಮೇಲೆ ನಿರೀಕ್ಷೆ ಮೂಡಲು ಹಲವು ಕಾರಣಗಳಿವೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈಗ ಈ ಸಿನಿಮಾದ ಹೊಸ ಪೋಸ್ಟರ್ ಅನಾವರಣ ಮಾಡಲಾಗಿದೆ. ಇದರಲ್ಲಿ ಎರಡು ವಿಶೇಷ ಅಂಶಗಳನ್ನು ಬಿಟ್ಟುಕೊಡಲಾಗಿದೆ. ಇದೇ ವರ್ಷ ‘ಕಂಗುವ’ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಅಲ್ಲದೇ ಈ ಚಿತ್ರದಲ್ಲಿ ಸೂರ್ಯ ಅವರು ದ್ವಿಪಾತ್ರ ಮಾಡುತ್ತಿದ್ದಾರೆ. ಈ 2 ವಿಚಾರಗಳನ್ನು ಪೋಸ್ಟರ್ ಮೂಲಕ ಬಿಟ್ಟುಕೊಡಲಾಗಿದೆ.
ಯಾವ ಪಾತ್ರ ಕೊಟ್ಟರೂ ಯಶಸ್ವಿಯಾಗಿ ನಿಭಾಯಿಸಬಲ್ಲ ಪ್ರತಿಭಾವಂತ ನಟ ಸೂರ್ಯ ಅವರು ಈಗಾಗಲೇ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಈಗ ಅವರು ‘ಕಂಗುವಾ’ ಸಿನಿಮಾದಲ್ಲಿ ಎರಡು ಡಿಫರೆಂಟ್ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಈ ಎರಡೂ ಪಾತ್ರಗಳು ಒಂದಕ್ಕೊಂದು ತದ್ವಿರುದ್ಧವಾಗಿವೆ. ಒಂದರಲ್ಲಿ ಅವರು ಪುರಾತನ ಕಾಲದ ವ್ಯಕ್ತಿಯಂತೆ ಕಾಣಿಸಿಕೊಂಡಿದ್ದರೆ, ಇನ್ನೊಂದರಲ್ಲಿ ಆಧುನಿಕ ಯುಗದ ವ್ಯಕ್ತಿಯಾಗಿ ಗನ್ ಹಿಡಿದು ನಿಂತಿದ್ದಾರೆ.
ಈ ಎರಡೂ ಪಾತ್ರಗಳು ಯುದ್ಧಕ್ಕೆ ಸಿದ್ಧವಾಗಿ ನಿಂತಂತಿವೆ. ಈ ಎರಡರಲ್ಲಿ ಒಂದು ಪಾತ್ರಕ್ಕೆ ನೆಗೆಟಿವ್ ಶೇಡ್ ಇರಲಿದೆಯಾ ಎಂಬ ಅನುಮಾನ ಕೂಡ ಅಭಿಮಾನಿಗಳ ಮನದಲ್ಲಿ ಮೂಡಿದೆ. ‘ಕಂಗುವ’ ಚಿತ್ರಕ್ಕೆ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. 2024ರಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ ಎಂಬುದು ಹೌದಾದರೂ ನಿರ್ದಿಷ್ಟ ದಿನಾಂಕವನ್ನು ಚಿತ್ರತಂಡ ಇನ್ನೂ ಪ್ರಕಟಿಸಿಲ್ಲ.
ನಟಿ ದಿಶಾ ಪಟಾನಿ ಅವರು ‘ಕಂಗುವ’ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಬಾಬಿ ಡಿಯೋಲ್ ಕೂಡ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರಿಗೂ ಇದು ಮೊದಲ ತಮಿಳು ಸಿನಿಮಾ. ದೇವಿ ಶ್ರೀ ಪ್ರಸಾದ್ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ‘ಸ್ಟುಡಿಯೋ ಗ್ರೀನ್’ ಮತ್ತು ‘ಯು.ವಿ. ಕ್ರಿಯೇಷನ್ಸ್’ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿವೆ. 10 ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗಲಿರುವ ಈ ಸಿನಿಮಾ 3ಡಿ ವರ್ಷನ್ನಲ್ಲೂ ಬರಲಿದೆ. ಈ ಎಲ್ಲ ಕಾರಣಗಳಿಂದ ಸಿಕ್ಕಾಪಟ್ಟೆ ಹೈಪ್ ಸೃಷ್ಟಿ ಮಾಡಿದೆ