ಹಿರಿಯೂರು, ಏಪ್ರಿಲ್. 15 : ಬಡವರ ಏಳಿಗೆ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಅನುಷ್ಠಾನಗೊಳಿಸಿದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿರುವುದು ದುರಂತ ಹಾಗೂ ಖಂಡನೀಯ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಕಿಡಿಕಾರಿದರು.
ತಾಲೂಕಿನ ಗುಯಿಲಾಳು ಟೋಲ್ ಬಳಿಯ ಖಾಸಗಿ ಹೋಟೆಲಿನಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರ ಕೈಯಲ್ಲಿ ಈ ಅಭಿವೃಧ್ದಿ ಯೋಜನೆಗಳು ಜಾರಿಗೆ ತರಲು ಆಗಲಿಲ್ಲ ಅಂದಮೇಲೆ ಜನಪರ ಯೋಜನೆಗಳನ್ನು ಸ್ವಾಗತ ಮಾಡಬೇಕು. ಅದನ್ನು ಬಿಟ್ಟು ಮಹಿಳೆಯರು ದಾರಿ ತಪ್ಪುತ್ತಿದ್ದಾರೆಂದು ಮಾತನಾಡುವುದು ಖಂಡನೀಯ.
ಮಹಿಳೆಯರಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ. ಮಹಿಳೆಯರ ಬಗ್ಗೆ ಹೇಳಿಕೆ ನೀಡಿ, ವಿರೋಧವ್ಯಕ್ತವಾದ ಬಳಿಕ ಕಾಂಗ್ರೆಸ್ ನವರು ಹೇಳಿಕೆ ತಿರುಚಿದ್ದಾರೆ ಎಂಬುದು ನಾಚಿಕೆಗೇಡಿನ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರಕಾರ ಜಾರಿಗೆ ಬಂದು ಹತ್ತು ತಿಂಗಳಲ್ಲಿ ನಾವು ಜನತೆಗೆ ಕೊಟ್ಟ ಭರವಸೆ ಈಡೇರಿಸಿ, ನುಡಿದಂತೆ ನಡೆದಿದ್ದೇವೆ. ಸರಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ. ಆದರೆ ನಿಮ್ಮ ಸಾಧನೆ ಏನು? ನಿಮಗೆ ಏಕೆ ಮತ ನೀಡಬೇಕು? ಎಂದು ಬಿಜೆಪಿಯನ್ನು ಪ್ರಶ್ನಿಸಿದರು. ಬಿಜೆಪಿ ಪೊಳ್ಳು ಭರವಸೆಗಳ ಹೇಳಿಕೆ ನೀಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ದೇಶದ ಜನತೆ ಎಚ್ಚೆತ್ತುಕೊಂಡಿದ್ದಾರೆ.
ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲವಿದ್ದು, ಕೇಂದ್ರ ಸರಕಾರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರೂ ನಯಾಪೈಸೆ ಬಿಡುಗಡೆ ಮಾಡಲಿಲ್ಲ. ಬರ ಪರಿಹಾರ ನೀಡದೆ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ದೇಶದಲ್ಲಿ ಬದಲಾವಣೆ ಅಲೆ ಎದ್ದಿದ್ದು, ಶಾಂತಿ, ನೆಮ್ಮದಿ ಹಾಗೂ ಸಹಬಾಳ್ವೆ ಜೀವನ ನಡೆಸಬೇಕೆಂದು ಜನತೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ವಿಜಯ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷೆ ಗೀತಾ ನಂದಿನಿ ಗೌಡ, ಮುಖಂಡರಾದ ವಕೀಲ ಯತೀಶ್, ಗುಯಿಲಾಳು ನಾಗರಾಜಯ್ಯ, ಖಾಲಿದ್ ಹುಸೇನ್, ಹೆಚ್.ಎಂ.ಅಜೀಂ ಪಾಷಾ ಸೇರಿದಂತೆ ಇತರರಿದ್ದರು.