ಮಂಗಳೂರು : ಲೋಕಸಭಾಚುನಾವಣೆಯ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಂಗಳೂರಿಗೆ ಆಗಮಿಸಿ ಬೃಹತ್ ರೋಡ್ ಶೋದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಕಿಕ್ಕಿರಿದು ಜನ ಸೇರಿದ್ದರು. ಇದೀಗ ಪ್ರಧಾನಿ ಮಂಗಳೂರು ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿಯವರು, ಮಂಗಳೂರಿನಲ್ಲಿ ನಡೆದ ರೋಡ್ ಶೋನಲ್ಲಿ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಿದ ಮಂಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಜನತೆಗೆ ನನ್ನ ಕೃತಜ್ಞತೆಗಳು. ಕರ್ನಾಟಕದ ಈ ಭಾಗ ಹಾಗೂ ನಮ್ಮ ಪಕ್ಷದ ನಡುವೆ ಬಲಿಷ್ಠ ಬಾಂಧವ್ಯವಿದೆ. ಉತ್ತಮ ಆಡಳಿತದ ನಮ್ಮ ಸಿದ್ಧಾಂತ ಮತ್ತು ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಿಸುವ ಹಾಗೂ ಆಚರಿಸುವ ನಮ್ಮ ಪ್ರಯತ್ನಗಳಿಗೆ ಜನತೆ ನಮ್ಮನ್ನು ವರ್ಷಗಳಿಂದ ಆಶೀರ್ವದಿಸಿದ್ದಾರೆ ಎಂದು ಹೇಳಿದ್ದಾರೆ.
ಮತಬ್ಯಾಂಕ್ ರಾಜಕಾರಣದಲ್ಲಿ ಮುಳುಗಿ ಜನರನ್ನು ವಿಭಜಿಸುವ ಕಾಂಗ್ರೆಸ್ ಗೆ ಮತ ಹಾಕಲು ದಕ್ಷಿಣ ಕನ್ನಡಕ್ಕೆ ಸಾಧ್ಯವಿಲ್ಲ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಗುಂಪುಗಾರಿಕೆಯಲ್ಲಿ ನಿರತವಾಗಿದೆ, ಸಾರ್ವಜನಿಕರ ಹಣವನ್ನು ಲೂಟಿ ಮಾಡಿ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ. ಅವರಿಗೆ ಕರ್ನಾಟಕದ ಸಂಸ್ಕೃತಿಯ ತಿಳುವಳಿಕೆ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ನಡೆದ ಬಿಜೆಪಿ ಸಮಾವೇಶದ ಬಳಿಕ ಪ್ರಧಾನಿ ಕಡಲನಗರಿ ಮಂಗಳೂರಿಗೆ ಆಗಮಿಸಿದರು. ಹಿಂದುತ್ವದ ಭದ್ರಕೋಟೆಗೆ ಆಗಮಿಸಿದ ಮೋದಿಯವರನ್ನು ಬಿಜೆಪಿ ನಾಯಕರು ಸ್ವಾಗತಿಸಿದರು. ಬಳಿಕ ಸುಮಾರು ೨ ಕಿ.ಮೀ ರೋಡ್ ಶೋದಲ್ಲಿ ಮೋದಿಯವರು ಭಾಗಿಯಾದರು. ಪ್ರಧಾನಿಯವರನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿತ್ತು. ಇಡೀ ಮಂಗಳೂರು ಕೇಸರಿಮಯವಾಗಿತ್ತು.
ರೋಡ್ ಶೋ ವೇಳೆ ರಸ್ತೆಯ ಇಕ್ಕೆಲಗಳಲ್ಲಿಯೂ ಹೂಮಳೆ ಸುರಿಸಲಾಯಿತು. ನೆಚ್ಚಿನ ಪ್ರಧಾನಿಯನ್ನು ಕಂಡು ಅಭಿಮಾನಿಗಳು ಹುಚ್ಚೆದ್ದು ಕುಣಿದರು. ನಾರಾಯಣ ಗುರು ಸರ್ಕಲ್‌ನಿಂದ ನವಭಾರತ್ ವೃತ್ತದವರೆಗೆ ಪ್ರಾಣಿಯವರು ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಜೇಶ್ ಚೌಟ ಹಾಗೂ ಉಡುಪಿ- ಚಿಕ್ಕಮಗಳೂರು ಅಭ್ಯರ್ಥಿ ಶ್ರೀನಿವಾಸ ಪೂಜಾರಿ ಸಾಥ್.