ಬೆಂಗಳೂರು, ಏಪ್ರಿಲ್ 15 : ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ಸಾಲುಗಳು ಬದಲಾಗಿದ್ದು ರಾಜ್ಯದಾದ್ಯಂತ ವಿವಾದಕ್ಕೀಡಾಗಿತ್ತು. ಇದೀಗ ಹಿಂದೂ ಗ್ರಂಥಾಲಯಗಳಲ್ಲಿ ಧರ್ಮಕ್ಕೆ ಅವಮಾನ ಮಾಡಿರುವ ಬಗ್ಗೆ ವರದಿಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ, ‘ಒಂದು ಮಂದಿರ ಕಟ್ಟಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ. ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ’ ಎಂಬ ಗೋಡೆಬರಹ ಪ್ರಕಟಿಸಲಾಗಿದೆ.
ಇದೀಗ ಗೋಡೆಬರಹಕ್ಕೆ ವ್ಯಾಪಕ ಆಕ್ಷೇಪವಿದೆ. ಗ್ರಂಥಾಲಯದ ಪ್ರವೇಶ ದ್ವಾರದ ಗೋಡೆಯ ಮೇಲೆ ಬರಹ ಪ್ರಕಟಿಸಲಾಗಿದೆ. ಈ ಗ್ರಂಥಾಲಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಹಿಂದೂ ಸಂಘಟನೆಗಳಿಂದ ವಿರೋಧ : ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದ ಗೋಡೆ ಬರಹಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹಿಂದೂಪರ ಸಂಘಟನೆಗಳು ಗೋಡೆಬರಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮಂದಿರದ ಬದಲಿಗೆ ಮಸೀದಿ ಎಂದು ಯಾಕೆ ಬಳಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ‘ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ’ ಎಂಬ ಬರಹಕ್ಕೆ ಬದಲಾಗಿ, ‘ಜ್ಞಾನ ದೇಗುಲವಿದು, ದೈರ್ಯವಾಗಿ ಪ್ರಶ್ನಿಸಿ’ ಎಂದು ಬರೆಸಿದ್ದು ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಯಿತು.
ವಿಧಾನಸಭೆಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲೇ ಈ ವಿಚಾರ ವಿವಾದಕ್ಕೀಡಾಗಿ ಸರ್ಕಾರ ಮೊದಲಿನಂತೆಯೇ ಗೋಡೆ ಬರಹ ಪ್ರಕಟಿಸಲು ಆದೇಶ ನೀಡಿತ್ತು. ಅದಕ್ಕೂ ಮುನ್ನ, ರಾಜ್ಯದ ಎಲ್ಲ ಸರ್ಕಾರಿ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆ ಮಾಡದಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸುತ್ತೋಲೆ ಹೊರಡಿಸಿತ್ತು. ನಂತರ ವಿವಾದಕ್ಕೀಡಾಗುತ್ತಿದ್ದಂತೆಯೇ ನಿರ್ಬಂಧದ ಆದೇಶವನ್ನು ವಾಪಸ್ ಪಡೆದಿತ್ತು.
ಶಿಕ್ಷಣ ಸಂಸ್ಥೆಗಳ ವಿಚಾರದಲ್ಲಿ ವಿವಾದಾತ್ಮಕ ನಿರ್ಧಾರಗಳನ್ನು ಕೈಗೊಂಡು ಆದೇಶ ಹೊರಡಿಸಿದ ನಂತರ ಯೂಟರ್ನ್ ತೆಗೆದುಕೊಂಡಿದ್ದ ರಾಜ್ಯ ಸರ್ಕಾರ ಇದೀಗ ಗ್ರಂಥಾಲಯ ಗೋಡೆಬರಹದ ವಿಚಾರದಲ್ಲಿ ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ.