Breaking
Wed. Dec 25th, 2024

ವಾಣಿವಿಲಾಸ ಸಾಗರ ಜಲಾಶಯದ ನೀರು ಖಾಲಿ ಮಾಡಲು ಹುನ್ನಾರ…!

ಹಿರಿಯೂರು, ಏಪ್ರಿಲ್. 16 : ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯದ ನೀರು ಖಾಲಿ ಮಾಡಲು ಹುನ್ನಾರ ನಡೆಸಲಾಗಿದೆ ಎಂಬುದಾಗಿ ರೈತ ಮುಖಂಡ ಹಾಗೂವಾಣಿವಿಲಾಸ ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚುಕಟ್ಟುದಾರ ರೈತಹಿತ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಆಪಾದಿಸಿದರು.

ವಾಣಿವಿಲಾಸ ಸಾಗರ ಜಲಾಶಯದಿಂದ ದಿನಾಂಕ:16-04-24 ರಂದು ಕಾರ್ತಿಕೇನಳ್ಳಿ ಅಣೆಕಟ್ಟು ಮುಖಾಂತರ ವೇದಾವತಿ ನದಿಗೆ ನೀರು ಹರಿಸಿ ಅಲ್ಲಿಂದ ಮೊಳಕಾಲ್ಮೂರು ಭಾಗಕ್ಕೆ ನೀರು ಹರಿಸುತ್ತಿದ್ದು, ಇದಕ್ಕೆ ಸ್ಥಳೀಯ ಅಚ್ಚುಕಟ್ಟು ರೈತರ ಹಿತವನ್ನು ಬಲಿಕೊಟ್ಟು ವಾಣಿವಿಲಾಸ ಸಾಗರವನ್ನು ಖಾಲಿ ಮಾಡುವ ಹುನ್ನಾರವನ್ನು ನಡೆಸಲಾಗಿದೆ. 

ಈ ವಾಣಿವಿಲಾಸ ಸಾಗರವನ್ನು ಖಾಲಿ ಮಾಡುವ ಕಾರ್ಯಕ್ಕೆ ಹಿರಿಯೂರು ಕ್ಷೇತ್ರದ ಶಾಸಕರು ಹಾಗೂಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರು ಹಾಗೂ ಚಳ್ಳಕೆರೆ ಕ್ಷೇತ್ರದ ಶಾಸಕರಾದ ರಘುಮೂರ್ತಿ ಅವರು ಟೊಂಕ ಕಟ್ಟಿನಿಂತಿದ್ದಾರೆ ಎಂಬುದಾಗಿ ಅವರು ಆರೋಪಿಸಿದರು. 

ಕಳೆದ ಎರಡು ವರ್ಷಗಳಲ್ಲಿ ವಾಣಿವಿಲಾಸ ಸಾಗರ ಜಲಾಶಯದ 23 ಅಡಿ ನೀರನ್ನು ನೀರಾವರಿ ಇಲಾಖೆಯ ಇಂಜಿನಿಯರ್ ಗಳು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಅವೈಜ್ಞಾನಿಕ ನಿರ್ಧಾರಗಳಿಂದ ಖಾಲಿ ಮಾಡಲಾಗಿದೆ ಎಂಬುದಾಗಿ ಅವರು ದೂರಿದರಲ್ಲದೆ,

ವಾಣಿವಿಲಾಸ ಸಾಗರ ನಿರ್ಮಿಸಿದ 1907ರಲ್ಲಿ ಇದರ ನೀರಿನ ಬಳಕೆ ಯಾವ ಬೆಳೆಗಳನ್ನು ಬೆಳೆಯಬೇಕು ಎಷ್ಟು ಪ್ರಮಾಣದಲ್ಲಿ ಬೆಳೆಯಬೇಕು ಹಾಗೂ ಇದರ ನೀರನ್ನು ವಾಣಿವಿಲಾಸ ಸಾಗರ ಅಚ್ಚುಕಟ್ಟು ವ್ಯಾಪ್ತಿಯ ತಾಲೂಕಿನ ರೈತರಿಗೆ ಮಾತ್ರ ಎಂಬುದಾಗಿ ನಿರ್ಧರಿಸಲಾಗಿದೆ. ಅದನ್ನು ಬರವಣಿಗೆ ರೂಪದಲ್ಲೂ ಇಡಲಾಗಿದೆ ಎಂಬುದಾಗಿ ಅವರು ತಿಳಿಸಿದರು. 

ನಮ್ಮ ನ್ಯಾಯಾಲಯಗಳು ಸಹ ಕಾಲಕಾಲಕ್ಕೆ ಜಲಾಶಯಗಳ ನೀರನ್ನು ಬಳಕೆ ಮಾಡುವಾಗ ಅಚ್ಚುಕಟ್ಟುದಾರ ರೈತರಹಿತವನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂಬ ನಿರ್ದೇಶನಗಳನ್ನು ಕೊಟ್ಟಿವೆ. ಆದರೆ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸೇರಿಕೊಂಡು ಅಚ್ಚುಕಟ್ಟು ರೈತರ ಗಮನಕ್ಕೆ ತರದೆ, ಸಲಹಾ ಸಮಿತಿಗಳ ಸಭೆಗಳನ್ನು ನಡೆಸದೆ, ತಮಗೆ ತಿಳಿದ ಹಾಗೆ ನೀರು ಹರಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ವಾಣಿ ವಿಲಾಸ ಸಾಗರ ಹಾಗೂ ಭದ್ರ ಮೇಲ್ದಂಡೆ ಅಚ್ಚುಕಟ್ಟು ದಾರ ರೈತರ ಹಿತರಕ್ಷಣ ಸಮಿತಿಯ ಗೌರವ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಸಿ.ಸಿದ್ದರಾಮಯ್ಯ, ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಖಜಾಂಚಿ ಬಬ್ಬೂರುಸುರೇಶ್, ವಂದೇ ಮಾತರಂ ರೈತರ ಸಂಘಟನೆಯ ಅಧ್ಯಕ್ಷ ಸಂತೋಷ್, ಬಬ್ಬೂರುಫಾರಂ ತಿಮ್ಮಾರೆಡ್ಡಿ, ನಿರ್ದೇಶಕರಾದಆರ್.ಕೆ.ಗೌಡ, ಬೀರೇನಹಳ್ಳಿ ಶಿವಣ್ಣ, ಕಾಂತರಾಜು ಸೇರಿದಂತೆ ಅನೇಕ ರೈತಮುಖಂಡರು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *