ಕನ್ನಡದ ನಟ ದ್ವಾರಕೀಶ್ ಅಂತ್ಯಕ್ರಿಯೆ ಇಂದು ಬೆಂಗಳೂರಿನ ಟಿ.ಆರ್.ಮೀಲ್ನಲ್ಲಿರುವ ಹಿಂದೂ ಹಿರಿಯ ರುದ್ರಭೂಮಿಯಲ್ಲಿ ನಡೆಯಿತು. ಬ್ರಾಹ್ಮಣರ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ದ್ವಾರಕೀಶ್ ಹಿರಿಯ ಪುತ್ರ ಸಂತೋಷ್ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅಲ್ಲಿಗೆ ದ್ವಾರಕೀಶ್ ಪಂಚಭೂತಗಳಲ್ಲಿ ಲೀನವಾದರು.
ಚಿತೆಗೆ ಅಗ್ನಿಸ್ಪರ್ಶಕ್ಕೂ ಮುನ್ನ ಪೊಲೀಸ್ ಇಲಾಖೆಯು ಪೊಲೀಸ್ ಗೌರವವನ್ನು ಸಲ್ಲಿಸಲಾಯಿತು. ನಂತರ ಬ್ರಾಹ್ಮಣ ವಿಧಿವಿಧಾನದ ಪ್ರಕಾರ ಪ್ರೇತ ಸಂಸ್ಕಾರ. ಆನಂತರ ಕಿವಿಯಲ್ಲಿ ನಾರಾಯಣ ಸ್ಮರಣೆ. ಚಿತಾ ಅಗ್ನಿ ಹೋಮದ ನಂತರ ಚಿತಾ ಶುದ್ಧಿ , ಭೂ ಸ್ಪರ್ಶ ದಹನ ಮಾಡಿ, ಆಮೇಲೆ ಅಗ್ನಿ ದಿಗ್ಬಂಧನ ಪಟ್ಟಿ.
ನಿನ್ನೆ ಬೆಳಗ್ಗೆ ದ್ವಾರಕೀಶ್ ಅವರು ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದರು. ನಿನ್ನೆಯಿಂದ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕನ್ನಡ ಚಿತ್ರೋದ್ಯಮದ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ದ್ವಾರಕೀಶ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.