ಬೆಂಗಳೂರು : ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾದೇಶದ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತರನ್ನು ಶಮೀಮ್ ಅಹಮದ್, ಮೊಹಮ್ಮದ್ ಅಬ್ದುಲ್ಲಾ, ನೂರ್ ಜಹಾನ್ ಮತ್ತು ಹರೂನ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಓರ್ವ ಮಹಿಳೆ ಸೇರಿ ಮೂವರು ಪುರುಷರು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಭಾರತದ ಪಾಸ್‌ಪೋರ್ಟ್ ಸಹ ಪಡೆದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿ ವೇಳೆ ಆರೋಪಿಗಳಿಂದ ಸಿಕ್ಕ ಆಧಾರ್ ಕಾರ್ಡ್ , ಜಾತಿ ಪ್ರಮಾಣ ಪತ್ರ, ರೇಷನ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಮಜ್ದೂರ್ ಕಾರ್ಡ್, ಮತದಾರರ ಗುರುತಿನ ಚೀಟಿಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಸೆರೆಹಿಡಿದದ್ದೇ ರೋಚಕ : ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿದ್ದ ಶಮೀಮ್ ಅಹಮದ್, ಮೊಹಮ್ಮದ್ ಅಬ್ದುಲ್ಲಾ, ನೂರ್ ಜಹಾನ್ ಮತ್ತು ಹರೂನ್ ಮೊಹಮ್ಮದ್ ಬನ್ನೇರುಘಟ್ಟ ರಸ್ತೆಯ ಬಿಸ್ಮಿಲಾನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜಮೀಲ್ ಎಂಬುವರ ಮನೆ ಬಾಡಿಗೆ ಪಡೆದು ವಾಸವಿದ್ದರು. ನಕಲಿ ಬಾಡಿಗೆ ಕರಾರು ಪತ್ರ ಮತ್ತು ವಾಸದ ದೃಢೀಕರಣ ಪತ್ರಗಳನ್ನೂ ಸಿದ್ಧಪಡಿಸಿಕೊಂಡಿದ್ದರು. ಆ ಮೂಲಕ ಆಧಾರ್ ಕಾರ್ಡ್, ಫ್ಯಾನ್ ಕಾರ್ಡ್, ರೇಷನ್ ಕಾರ್ಡ್‌ಗಳನ್ನೂ ಹೊಂದಿದ್ದರು.
ಅಲ್ಲದೇ ನಾಲ್ವರು ಸ್ಥಳೀಯರ ಸಹಾಯದಿಂದ ಭಾರತದ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದರು. ಅನಧಿಕೃತ ದಾಖಲೆ ನೀಡಿ ಪಾಸ್‌ಪೋರ್ಟ್ ಸಹ ಮಾಡಿಸಿಕೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಬಿಸ್ಮಿಲ್ಲಾ ನಗರದ ಮನೆ ಮೇಲೆ ದಾಳಿ ನಡೆಸಿ ಅಕ್ರಮವಾಸಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಾಂಗ್ಲಾ ಪ್ರಜೆಗಳಿಗೆ ಸಹಾಯ ಮಾಡಿದ್ದ ಮುಬಾರಕ್, ಮುನೀರ್, ಹುಸೇನ್, ನಹೀಂ ಎಂಬ ನಾಲ್ವರು ಯುವಕರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.