Breaking
Wed. Dec 25th, 2024

ಮೋದಿ ಸರ್ಕಾರ ಕಾರ್ಮಿಕರ ಮತ್ತು ಎಲ್ಲಾ ವರ್ಗದ ಜನರನ್ನು ವಿಭಜಿಸಲು ಮತ್ತು ಅವರ ಐಕ್ಯತೆಗೆ ಭಂಗ ತರಲು ಪ್ರಯತ್ನಿಸುತ್ತಿದೆ…!

ಚಿತ್ರದುರ್ಗ ಏ. 19 : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾಯ್ದೆ ಮತ್ತು ಸೆಸ್ ಕಾಯ್ದೆ ರಕ್ಷಣೆಗಾಗಿ ನಿರ್ಮಾಣ ಕಾರ್ಮಿಕರ ಹಕ್ಕುಗಳು ಕಲ್ಯಾಣ ಮಂಡಳಿ ಸೌಲಭ್ಯಗಳ ಉಳಿವಿಗಾಗಿ ಶ್ರೀಮಂತ ಕಂಪೆನಿಗಳ ಪರವಾದ ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ ಸಮಾಜದ ಶಾಂತಿ ಸೌಹಾರ್ದತೆ ಹಾಗೂ ಸಹಬಾಳ್ವೆಗಾಗಿ ಲೋಕಸಭಾ ಚುನಾವಣೆ 2024 ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ವಿರುದ್ಧ ಮತ ಚಲಾಯಿಸಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ) ಚಿತ್ರದುರ್ಗ ಜಿಲ್ಲಾ ಸಮಿತಿ ನಿರ್ಧಾರ ಮಾಡಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಸ್ ಪೀರ್ ತಿಳಿಸಿದ್ದಾರೆ.

ಚಿತ್ರದುರ್ಗ  ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಟ್ಟಡ ನಿರ್ಮಾಣ ಕಾರ್ಮಿಕರಾದ ನಾವು ದೇಶದ ಒಟ್ಟು ಮತದಾರರಲ್ಲಿ ಗಣನೀಯ ಸಂಖ್ಯೆಯಲ್ಲಿದ್ದೇವೆ. ಈ ಲೋಕಸಭಾ ಚುನಾವಣೆಯಲ್ಲಿ ಸುಮಾರು 5 ಕೋಟಿಗೂ ಹೆಚ್ಚು ಕಟ್ಟಡ ಕಾರ್ಮಿಕರು ಮತ್ತು ನಮ್ಮ ಕುಟುಂಬದ ಸೇರಿ ಸುಮಾರು 20 ಕೋಟಿಗೂ ಅಧಿಕ ಜನರು ಮತದಾನ ಮಾಡುವ ನಿರೀಕ್ಷೆಯಿದೆ.

ಕರ್ನಾಟಕದಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ನಿರ್ಮಾಣ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರು ಮತಗಳನ್ನು ಚಲಾಯಿಸುವ ಅವಕಾಶ ಪಡೆದಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಕಾರ್ಮಿಕ ಹಕ್ಕುಗಳನ್ನು ದಮನ ಮಾಡುವುದು, ಹಾಲಿ ಇರುವ ಕಲ್ಯಾಣ ಸೌಲಭ್ಯಗಳನ್ನು ತೆಗೆದು ಹಾಕುವ ಪ್ರಯತ್ನಗಳನ್ನು ಈ ಅವಧಿಯಲ್ಲಿ ಕೇಂದ್ರ ಸರ್ಕಾರ ನಡೆಸಿದೆ. ಇಂತಹ ಸನ್ನಿವೇಶದಲ್ಲೇ ಮತ್ತೆ ಅಧಿಕಾರಕ್ಕೆ ಮರಳಲು ಬಿಜೆಪಿ ಸಕಲ ಪ್ರಯತ್ನಗಳನ್ನು ನಡೆಸಿದೆ ಎಂದರು.

ಕಳೆದ ಹತ್ತು ವರ್ಷಗಳ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ನಿರ್ಮಾಣ ಕಾರ್ಮಿಕರ ಜೀವನ ಮತ್ತು ಜೀವನೋಪಾಯದ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಿ ನಮ್ಮ ದೇಶದ ದುಡಿಯುವ ಜನರಿಗೆ ದ್ರೋಹ ಮಾಡಿದೆ. ಈ ನೀತಿಗಳು ಬೃಹತ್ ಉದ್ಯೋಗ ನಷ್ಟ, ನಿರುದ್ಯೋಗಕ್ಕೆ ಕಾರಣವಾಗಿವೆ. ಬೆಲೆ ಏರಿಕೆ, ಬಡತನ ಮತ್ತು ಹಸಿವುಗಳನ್ನು ಕಟ್ಟಡ ಕಾರ್ಮಿಕರು ಅನುಭವಿಸಿದ್ದಾರೆ.

ನಮ್ಮ ದೇಶದ ಹಾಗೂ ವಿದೇಶಿ ಶ್ರೀಮಂತ ಕುಟುಂಬಗಳ ಜತೆ ಬಿಜೆಪಿ ಹಾಗೂ ಆರ್.ಎಸ್.ಎಸ್ ಮತ್ತು ಅದರ ವಿವಿಧ ಸಂಘಟನೆಗಳು ನಿಕಟ ಸಂಬಂಧ ಹೊಂದಿವೆ ಅಂತಹ ಕಂಪನಿಗಳ ನೀಡುವ ಸಾವಿರಾರು ಕೋಟಿ ರುಪಾಯಿಗಳನ್ನು ಬಳಸಿ ಮೋದಿ ಸರ್ಕಾರ ಕಾರ್ಮಿಕರ ಮತ್ತು ಎಲ್ಲಾ ವರ್ಗದ ಜನರನ್ನು ವಿಭಜಿಸಲು ಮತ್ತು ಅವರ ಐಕ್ಯತೆಗೆ ಭಂಗ ತರಲು ಉಗ್ರ ಕೋಮು ವಿಷವನ್ನು ಹರಡುತ್ತಿದೆ. ಇದು ನಮ್ಮ ಕೆಲಸ ಮತ್ತು ಜೀವನ ಪರಿಸ್ಥಿತಿಗಳ ಮೇಲಿನ ದಾಳಿಯಾಗಿದೆ.

ಮತ್ತು ನಾವು ನಡೆಸುವ ಐಕ್ಯ ಹೋರಾಟಗಳನ್ನು ದುರ್ಬಲಗೊಳಿಸುತ್ತದೆ ಇದರಿಂದ ಕಾರ್ಪೊರೇಟ್ ವರ್ಗಗಳಿಗೆ ಲಾಭವಾಗುತ್ತದೆ. ನಿರ್ಮಾಣ ಕೆಲಸಗಳು ಸರಾಗವಾಗಿ ಸಾಗಬೇಕಾದರೆ ದೇಶದ ಜನತೆ ಹಾಗೂ ದುಡಿಯುವ ವರ್ಗ ಜಾತಿ ಧರ್ಮದ ಹೆಸರಲ್ಲಿ ವಿಘಟನೆಯಾಗಬಾರದು ಮತ್ತು ಸಮಾಜದಲ್ಲಿ ಶಾಂತಿ ನೆಲೆಸುವುದು ಅತಿ ಅಗತ್ಯವಾಗಿದೆ.

ಹೀಗಾಗಿ ಕಾರ್ಮಿಕರು ಮತ್ತು ಸಾಮಾನ್ಯವಾಗಿ ಎಲ್ಲಾ ಶ್ರಮಜೀವಿಗಳು ‘ಕಾಂತಿ ಹಾಗೂ ಸೌಹಾರ್ಧತೆಗಾಗಿ” ಈ ಚುನಾವಣೆಯಲ್ಲಿ ತಮ್ಮ ಮತವನ್ನು ಚಲಾಯಿಸುವುದು ಅಗತ್ಯವಿದೆ ಎಂದು ತಿಳಿಸಿದರು. ಈ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ವಲಯದ ಕಾರ್ಮಿಕರು ನಿಮ್ಮ ಕುಟುಂಬದವರು ತಮ್ಮ ಅಮೂಲ್ಯ ಮತವನ್ನು ಬಳಸಿ ಮೋದಿ ಸರಕಾರವು ಕೇಂದ್ರದಲ್ಲಿ ಮೂರನೇ ಅವಧಿಗೆ ಅಧಿಕಾರಕ್ಕೆ ಬರದಂತೆ ತಡೆ ಒಡ್ಡಬೇಕಿದೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಸೋಲಿಸಬೇಕಿದೆ.

ಕರ್ನಾಟಕದ ಮತ್ತು ದೇಶದ ಕಟ್ಟಡ ನಿರ್ಮಾಣ ಕಾರ್ಮಿಕರ ಭವಿಷ್ಯದ ದೃಷ್ಟಿಯಿಂದ ಇದು ತೀರ ಅವಶ್ಯವಾಗಿದೆ ಕರ್ನಾಟಕದ ಉಳಿದ ಎಲ್ಲ 27 ಕ್ಷೇತ್ರಗಳಲ್ಲಿ ಜಾತ್ಯಾತೀತ ಪಕ್ಷವಾಗಿರುವ ಮತ್ತು ‘ಇಂಡಿಯಾ’ ಒಕ್ಕೂಟದ ಭಾಗವಾದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕಿರುವುದು ರಾಜ್ಯದ ನಿರ್ಮಾಣ ಕಾರ್ಮಿಕರ ಭವಿಷ್ಯದ ದೃಷ್ಟಿಯಿಂದ ಮತ್ತು ಕಲ್ಯಾಣ ಮಂಡಳಿ ಸೌಲಭ್ಯಗಳನ್ನು ಪಡೆದುಕೊಳ್ಳುವ ದೃಷ್ಟಿಯಿಂದ ಅನಿವಾರ್ಯವಾಗಿದೆ.

ನಮ್ಮ ಈ ಬೆಂಬಲ ರಾಜ್ಯದಲ್ಲಿರುವ ಕಲ್ಯಾಣ ಮಂಡಳಿ ಹಾಗೂ ಹಾಲಿ ಇರುವ ಸೌಲಭ್ಯಗಳ ರಕ್ಷಣೆಗಾಗಿ ಮತ್ತು ಮುಂದಿನ ನಾಲ್ಕು ವರ್ಷಗಳ ಕಾಲ ರಾಜ್ಯದಲ್ಲಿ ಅಧಿಕಾರ ನಡೆಸುವ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರಲು ನಮಗೆ ಸಹಾಯಕವಾಗಲಿದೆ ಎನ್ನುವುದು ನಮ್ಮ ಆಶಯವಾಗಿದೆ.

ಈ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ತಮ್ಮ ಹಾಗೂ ತಮ್ಮ ಕುಟುಂಬದ ಎಲ್ಲ ಸದಸ್ಯರು ಮತ ಚಲಾಯಿಸಬೇಕೆಂದು ಮನವಿ ಮಾಡಿದರು. ಗೋಷ್ಟಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಹೊಳಲ್ಕೆರೆ ತಾಲೂಕು ಕಾರ್ಯದರ್ಶಿ ಮಲ್ಲಿಕಾರ್ಜುನ, ಮಹಿಳಾ ಸಂಚಾಲಕಿ ಸಣ್ಣಮ್ಮ, ಇಸ್ಮಾಯಿಲ್, ಉಮೇಶ್, ನಾಗರಾಜು, ರಂಗಸ್ವಾಮಿ ಸೇರಿದಂತೆ ಇತರರ ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *