Breaking
Wed. Dec 25th, 2024

ನರೇಂದ್ರಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾದಾಗ ಮಾತ್ರ ಮಾದಿಗರ ಮೀಸಲಾತಿ ವರ್ಗಿಕರಣ ಸಾಧ್ಯ….!

ಚಿತ್ರದುರ್ಗ, ಏಪ್ರಿಲ್.18 : ನರೇಂದ್ರಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾದಾಗ ಮಾತ್ರ ಮಾದಿಗರ ಮೀಸಲಾತಿ ವರ್ಗಿಕರಣ ಸಾಧ್ಯ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ. ಸರ್ಕಾರ ಪರಿಶಿಷ್ಠ ಜಾತಿ ಪರಿಶಿಷ್ಟ ವರ್ಗದವರ ಪರವಾಗಿದೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆಂದು ಕಾಂಗ್ರೆಸ್‍ನವರು ದಲಿತರಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಕೇವಲ ನಲವತ್ತು ಪರ್ಸೆಂಟ್ ಎಸ್ಸಿ.ಎಸ್ಟಿ.ಗಳಿಗೆ ಸಚಿವ ಸ್ಥಾನ ಕೊಡಲಾಗಿತ್ತು. ಅದೇ ಬಿಜೆಪಿ. ಸರ್ಕಾರದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ಶೇ. 60 ಪರ್ಸೆಂಟ್ ಸಚಿವ ಸ್ಥಾನ ನೀಡಲಾಗಿತ್ತು ಎಂದು ತಿಳಿಸಿದರು.

ಮನಮೋಹನ್‍ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ಪ್ರಣಬ್‍ಮುಖರ್ಜಿ ಹಾಗೂ ಪ್ರತಿಭಾ ಪಾಟೀಲ್ ಇವರುಗಳನ್ನು ರಾಷ್ಟ್ರಪತಿಯನ್ನಾಗಿ ಮಾಡಿ ಬ್ರಾಹ್ಮಣರನ್ನು ಓಲೈಸುವ ಕೆಲಸ ಮಾಡಿತು. ಅದೇ ಈಗಿನ ನಮ್ಮ ಪ್ರಧಾನಿ ನರೇಂದ್ರಮೋದಿ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮುರನ್ನು ರಾಷ್ಟ್ರಪತಿಯನ್ನಾಗಿ ಮಾಡಿ ಶೋಷಿತರ ಪರವಾಗಿದ್ದೇವೆನ್ನುವುದನ್ನು ತೋರಿಸಿದರು.

ಕೇಂದ್ರದಲ್ಲಿ ಯು.ಪಿ.ಎ.ಸರ್ಕಾರ ಅಧಿಕಾರದಲ್ಲಿದ್ದಾಗ ಸೋನಿಯಾಗಾಂಧಿ, ರಾಹುಲ್‍ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇವರುಗಳನ್ನು ಸಾಕಷ್ಟು ಬಾರಿ ಭೇಟಿಯಾಗಿ ಮಾದಿಗರ ಮೀಸಲಾತಿ ವರ್ಗೀಕರಣಗೊಳಿಸುವಂತೆ ಮನವಿ ಮಾಡಿದ್ದೆ. ಯಾರು ಕಿವಿಗೆ ಹಾಕಿಕೊಳ್ಳಲಿಲ್ಲ. ನಮ್ಮ ಹೋರಾಟಕ್ಕೆ ಕಾಂಗ್ರೆಸ್ ವಿರುದ್ದವಿದೆ. ಹೈದರಾಬಾದ್‍ನಲ್ಲಿ ನಡೆದ ಮಾದಿಗರ ಮೀಸಲಾತಿ ವರ್ಗಿಕರಣ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಮೀಸಲಾತಿ ವರ್ಗಿಕರಣಗೊಳಿಸುವುದಾಗಿ ಭರವಸೆ ಕೊಟ್ಟಿದ್ದರು. ಹಾಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ. ಅಭ್ಯರ್ಥಿಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಕೇವಲ ಕರ್ನಾಟಕವಷ್ಟೆ ಅಲ್ಲ. ತೆಲಂಗಾಣ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ಛತ್ತಿಸ್‍ಗಡದಲ್ಲಿಯೂ ಬಿಜೆಪಿ ಗೆಲುವಿಗೆ ಶ್ರಮಿಸುತ್ತೇವೆಂದರು.

ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಮಾದಿಗರ ಮೀಸಲಾತಿ ವರ್ಗಿಕರಣಕ್ಕೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸದಾಶಿವ ಆಯೋಗ ನೇಮಿಸಿದ್ದರು ಕೂಡ ಕಾಂಗ್ರೆಸ್ ನಮಗೆ ವ್ಯತಿರಿಕ್ತವಾಗಿದೆ. ಸುಪ್ರಿಂಕೋರ್ಟ್‍ನಲ್ಲಿ ಕೇಸು ಬಾಕಿಯಿದ್ದು, ವಿಚಾರಣೆ ನಡೆಯುತ್ತಿದೆ. ಮಾದಿಗರ ಮೀಸಲಾತಿ ವರ್ಗಿಕರಣಕ್ಕೆ ನ್ಯಾಯ ಕೊಡಿಸುವುದು ನನ್ನ ಹೋರಾಟದ ಉದ್ದೇಶ. ಯು.ಪಿ.ಎ.ಸರ್ಕಾರದಲ್ಲಿ ಮೀಸಲಾತಿ ಎನ್ನುವುದು ಮುಂದೆ ಸಾಗಲಿಲ್ಲ.

ಮೀಸಲಾತಿ ವರ್ಗಿಕರಣಕ್ಕೆ ಅಡ್ಡಿಯಾಗಿರುವ ಕಾಂಗ್ರೆಸ್ ಪಕ್ಷವನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಿ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ.ಯನ್ನು ಅಧಿಕಾರಕ್ಕೆ ತರಬೇಕಾಗಿರುವುದರಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರನ್ನು ಬಹುಮತಗಳಿಂದ ಗೆಲ್ಲಿಸಿ ಎಂದು ಮಂದಕೃಷ್ಣ ಮಾದಿಗ ಮನವಿ ಮಾಡಿದರು.

ಮಾದಿಗ ಮೀಸಲಾತಿ ವರ್ಗಿಕರಣ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನರಸಪ್ಪ, ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ತಿಪ್ಪೇಸ್ವಾಮಿ ಛಲವಾದಿ, ಮಂಜಣ್ಣ ಚಿಕ್ಕಾಲಘಟ್ಟ, ಹನುಮಂತಪ್ಪ ದುರ್ಗ, ದೇವರಾಜ್ ನಗರಂಗೆರೆ, ಮೋಹನ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Related Post

Leave a Reply

Your email address will not be published. Required fields are marked *