ಚಿತ್ರದುರ್ಗ, ಏಪ್ರಿಲ್. 19 : “ದೇಶದಾದ್ಯಂತ ಇಂದು ಎರಡು ಒಕ್ಕೂಟಗಳು ಜನರ ಮುಂದಿವೆ. ಒಂದು ಬಿಜೆಪಿ ನೇತೃತ್ವದ ಎನ್‍ಡಿಎ ಮತ್ತು ಇನ್ನೊಂದು ಕಾಂಗ್ರೆಸ್ ನೇತ್ರತ್ವ ಇಂಡಿಯಾ. ಇವೆರಡನ್ನು ನಾವು ಸಮಾನವಾಗಿ ವಿರೋಧಿಸುತ್ತೇವೆ ಎಂದು ಎಸ್‍ಯುಸಿಐ(ಕಮ್ಯುನಿಸ್ಟ್) ಪಕ್ಷದ ಪಾಲಿಟ್‍ಬ್ಯೂರೋ ಸದಸ್ಯರಾಗಿರುವ ಹಾಗೂ ದಕ್ಷಿಣ ರಾಜ್ಯಗಳ ಉಸ್ತುವಾರಿಯೂ ಆಗಿರುವ ಕಾಮ್ರೇಡ್ ಕೆ.ರಾಧಾಕೃಷ್ಣ ಹೇಳಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಸುಜಾತ. ಡಿ ಇವರ ಚುನಾವಣಾ ಪ್ರಚಾರದ ಅಂಗವಾಗಿ ಚಿತ್ರದುರ್ಗಕ್ಕೆ ಇಂದು ಭೇಟಿ ನೀಡಿದ ಅವರು ಪಕ್ಷದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ‘ಮಾಧ್ಯಮ ಪ್ರತಿನಿಧಿಗಳ ಜೊತೆಯಲ್ಲೊಂದು ಸಂವಾದ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಕ್ಷಗಳು ಅಧಿಕಾರದಲ್ಲಿ ಇರುವಾಗ ಜನತೆಗೆ ದ್ರೋಹ ಬಗೆದಿವೆ. ತಾವು ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಭ್ರಷ್ಟಾಚಾರ ಮುಕ್ತ ಭಾರತವನ್ನು ನಿರ್ಮಿಸುತ್ತೇವೆ ಎಂದು ಕಳೆದ ಹತ್ತು ವರ್ಷದಿಂದ ಈಚೆಗೆ ಭಾರಿ ಭರವಸೆಗಳೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಬಡವರ ಪಾಲಿಗೆ ಅಚ್ಚೆದಿನ್, ಕಪ್ಪು ಹಣವನ್ನು ವಾಪಸ್ ತಂದು ಹಂಚುವುದು, ಭೇಟಿ ಬಚಾವೋ ಭೇಟಿ ಪಡಾವೋ, ಇವೇ ಮೊದಲಾದ ಆಶ್ವಾಸನೆಗಳನ್ನು ನೀಡಿತ್ತು. ಆದರೆ ಅವೆಲ್ಲವನ್ನು ಹುಸಿಗೊಳಿಸಿದೆ. ಕೊಟ್ಟ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದೆ.
ಕಾಂಗ್ರೆಸ್ ಕಳೆದ 60 ವರ್ಷಗಳಲ್ಲಿ ಮಾಡಿದ ಹಗರಣಗಳನ್ನು ಕೇವಲ ಹತ್ತು ವರ್ಷಗಳಲ್ಲಿ ಮಾಡಿ ಮುಗಿಸಿದೆ. ಈಗ ಇದಕ್ಕೆ ಪರ್ಯಾಯವಾಗಿ ಕೆಲವು ಪಕ್ಷಗಳು ಸೇರಿ ಕಾಂಗ್ರೆಸ್ ನೇತೃತ್ವದಲ್ಲಿ ‘ಇಂಡಿಯಾ’ ಒಕ್ಕೂಟ ರಚಿಸಿಕೊಂಡಿವೆ. ಇನ್ನು ಸಿಪಿಐ ಸಿಪಿಐಎಂ ನಂತಹ ಎಡಪಕ್ಷಗಳು ಕೆಲ ಪ್ರಾದೇಶಿಕ ಪಕ್ಷಗಳು ಇಂಡಿಯಾ ಒಕ್ಕೂಟದ ಬೆಂಬಲಕ್ಕೆ ನಿಂತಿವೆ. ಆದರೆ ಇದು ಜನತೆಗೆ ನಿಜವಾದ ಪರ್ಯಾಯವಲ್ಲ. ಬಂಡವಾಳಶಾಹಿಗಳ ಪರ್ಯಾಯ ಆಯ್ಕೆ ಅಷ್ಟೇ. ಈ ಎರಡು ದೊಡ್ಡ ಪಕ್ಷಗಳು ಜಾರಿಗೊಳಿಸುವ ಮತ್ತು ಅನುಸರಿಸುವ ನೀತಿಗಳು ಒಂದೇ ಆಗಿವೆ.
ಅಲ್ಲದೆ ಅವುಗಳ ಒಕ್ಕೂಟದಲ್ಲಿರುವ ಮಿತ್ರ ಪಕ್ಷಗಳು ಅದೇ ನೀತಿಗಳನ್ನು ಅನುಸರಿಸುತ್ತಿವೆ. ಆದ್ದರಿಂದ ಜ್ವಲಂತ ಸಮಸ್ಯೆಗಳ ವಿರುದ್ಧ ಬಲಿಷ್ಠ ಜನಾಂದೋಲನ ಕಟ್ಟುವ ಮೂಲಕ ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟಿಕೊಳ್ಳಲು ಜನಗಳಿಗೆ ನಾವು ಕರೆ ನೀಡುತ್ತೇವೆ. ಆದ್ದರಿಂದ ಇಂದು ನೈಜ ಜನಪರ ಹೋರಾಟಗಳನ್ನು ಬೆಳೆಸುತ್ತಿರುವ ನಮ್ಮ ಪಕ್ಷ ಏಕಾಂಗಿಯಾಗಿ ದೇಶದ 151 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಂಸತ್ತಿನಲ್ಲಿ ಜನಪರ ಹೋರಾಟದ ಧ್ವನಿಯೆತ್ತಲು ಜನತೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.